ಕಣ್ಣೀರಿಡುತ್ತ ಕ್ಷಮೆಯಾಚಿಸಿದ ವೆಲ್ಲೂರು ಮೇಯರ್ ಕಾತ್ಯಾಯಿನಿ
ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ದೋಷಿ ಎಂದು ಪರಿಗಣಿಸಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಶೇಷ...
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ದೋಷಿ ಎಂದು ಪರಿಗಣಿಸಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕೇಲ್ ಡಿ'ಕುನ್ಹಾ ಅವರ ಪ್ರತಿಕೃತಿ ದಹನ ಮಾಡಿದ ಪ್ರಕರಣ ಸಂಬಂಧ ವೆಲ್ಲೂರು (ತಮಿಳುನಾಡು) ನಗರ ಪಾಲಿಕೆ ಮೇಯರ್ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈಬಿಟ್ಟಿದೆ.
ಪ್ರಕರಣ ಸಂಬಂಧ ವಕೀಲ ಧರ್ಮಪಾಲ್ ಮತ್ತು ಸಾಮಾಜಿಕ ಕಾರ್ಯಕರ್ತ ಜೈಕುಮಾರ್ ಹಿರೇಮಠ್ ಮತ್ತಿತರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಬಿಳ್ಳಪ್ಪ ಮತ್ತು ನ್ಯಾ.ಕೆ. ಎನ್. ಫಣೀಂದ್ರ ಅವರಿದ್ದ ನ್ಯಾಯಪೀಠಕ್ಕೆ ನ್ಯಾಯಾಂಗ ನಿಂದನೆಗೆ ಒಳಗಾಗಿದ್ದ ವೆಲ್ಲೂರು ಮೇಯರ್ ಕಾತ್ಯಾಯಿನಿ ಖುದ್ದು ಹಾಜರಾಗಿ ಬೇಷರತ್ ಕ್ಷಮೆ ಯಾಚಿಸಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈ ಬಿಡಲಾಗಿದೆ.
ಕಣ್ಣೀರಿಡುತ್ತ ಕ್ಷಮೆ ಕೋರಿದ ಕಾತ್ಯಾಯಿನಿ, ನ್ಯಾಯಾಧೀಶರಾಗಿದ್ದ ಜಾನ್ ಕುನ್ಹಾರನ್ನು ಖುದ್ದು ಭೇಟಿಯಾಗಿ ಕ್ಷಮೆಯಾಚಿಸಲಾಗುವುದು. ಕನ್ನಡಪ್ರಭ ಸೇರಿದಂತೆ ನಾಲ್ಕು ದಿನ ಪತ್ರಿಕೆಗಳಲ್ಲಿ ಕ್ಷಮಾಪಣೆ ಪತ್ರ ಪ್ರಕಟಿಸಿ ಬಳಿಕ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ಪ್ರಮಾಣ ಪತ್ರಸಲ್ಲಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟಿತು.