ಬೆಂಗಳೂರು: ಬೆಂಗಳೂರಿನ ಜಕ್ಕರಾಯನ ಕೆರೆ ಪ್ರದೇಶದಲ್ಲಿ ಜೆಡಿಎಸ್ ಪಕ್ಷದ ಕಚೇರಿ ನಿರ್ಮಾಣ ಮಾಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಮೀನು ಮಂಜೂರು ಮಾಡಿರುವ ಕ್ರಮ ಯಾವ ಕಾನೂನಿನಡಿ ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ.
ಜೆಡಿಎಸ್ ಕಟ್ಟಡ ನಿರ್ಮಾಣಕ್ಕಾಗಿ ಜಮೀನು ಮಂಜೂರು ಮಾಡಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ನ್ಯಾಯಪೀಠ, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ತಿಳಿಸಿ ವಿಚಾರಣೆಯನ್ನು ನ.23ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಜೆಡಿಎಸ್ ವಕೀಲರು, ಈ ಪ್ರದೇಶವನ್ನು 2001ರಲ್ಲಿ ಆಸ್ಪತ್ರೆಗೆಂದು ಮೀಸಲಿಡಲಾಗಿತ್ತು. ಆದರೆ, ಈ ಸಂಬಂಧ ಸರಕಾರ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಅಲ್ಲದೆ, ಈ ಹಿಂದೆ ಪಕ್ಷದ ಕಚೇರಿ ನಿರ್ಮಾಣಕ್ಕೆ ಪಾಲಿಕೆ ಮಂಜೂರು ಮಾಡಿದ್ದ ಜಾಗದ ಸಂಬಂಧ ವಾದ ನ್ಯಾಯಾಲಯ ಮೆಟ್ಟಿಲೇರಿದ್ದ ಸಂದರ್ಭ, ಪರ್ಯಾಯ ಜಾಗವನ್ನು ಮಂಜೂರು ಮಾಡುವಂತೆ ಹೈಕೋರ್ಟ್‍ನ ಏಕ ಸದಸ್ಯ ಪೀಠ ಬಿಬಿಎಂಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಿಎಂಪಿ ಜಕ್ಕರಾಯನ ಕೆರೆಯಲ್ಲಿ ಜಾಗ ನೀಡಿದ್ದು, ಈಗಾಗಲೇ ಕಚೇರಿ ನಿರ್ಮಾಣದ ಕೆಲಸ ಭರದಿಂದ ಸಾಗಿದೆ. ಇದಕ್ಕಾಗಿ ಸುಮಾರು 1 ಕೋಟಿ ವೆಚ್ಚ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಅರ್ಜಿದಾರರ ಪರ ವಕೀಲರು, ಆಸ್ಪತ್ರೆ ನಿರ್ಮಾಣಕ್ಕಾಗಿ ಬಿಬಿಎಂಪಿ 4.5 ಕೋಟಿ ನಿಗದಿಪಡಿಸಿತ್ತು. ಅಲ್ಲದೆ, ಸ್ಥಳೀಯ ಶಾಸಕರೂ ಆದ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು ಎಂದು ವಾದಿಸಿದರು.
ಇದಕ್ಕೆ ಪ್ರಶ್ನಿಸಿದ ನ್ಯಾಯಪೀಠ, ಸರ್ಕಾರದ ಯೋಜನೆಗಳಿಗೆಂದು ಮೀಸಲಿಟ್ಟ ಹಣವೆಲ್ಲಾ ಉದ್ದೇಶಿತ ಯೋಜನೆಗಳಿಗೆ ಬಳಕೆಯಾಗುತ್ತಿದೆಯೇ? ಬಹಳಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದೇ ಇಲ್ಲ. ಹಲವಾರು ಯೋಜನೆಗಳ ಹಣವನ್ನು ಬೇರೆ ಕಡೆ ಬಳಸಲಾಗುತ್ತಿಲ್ಲವೇ ಎಂದು ಮೌಖಿಕವಾಗಿ ಪ್ರಶ್ನಿಸಿ, ಕಚೇರಿ ನಿರ್ಮಾಣಕ್ಕೆ ಸ್ಥಳ ನೀಡಿರುವುದು ಯಾವ ಕಾನೂನಿಗೆ ವಿರುದ್ಧವಾಗಿದೆ ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟಪಡಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.