ಬೆಂಗಳೂರು: ಸರಕು ಸಾಗಣೆ ಹಾಗೂ ಖಾಸಗಿ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆ ಯುವಂತೆ ಆಗ್ರಹಿಸಿ ರಾಜ್ಯ ಲಾರಿ ಮಾಲೀಕರು ಮತ್ತು ಚಾಲಕರ ಸಂಘ ಡಿ. 1ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದೆ.
ಈ ಮುಷ್ಕರಕ್ಕೆ ಖಾಸಗಿ ಬಸ್‍ಗಳು ಹಾಗೂ ವಾಣಿಜ್ಯ ವಾಹನಗಳ ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿದ್ದು, 4 ಲಕ್ಷಕ್ಕೂ ಅಧಿಕ ಲಾರಿಗಳು ಹಾಗೂ ಸಾವಿರಾರು ಖಾಸಗಿ ಬಸ್‍ಗಳು ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸಲಿವೆ ಎಂದು ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದ್ದಾರೆ.
ಸರಕು ಸಾಗಣೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆಗೆ ಕೇಂದ್ರ ಸರ್ಕಾರ ಏ.1ರವರೆಗೆ ಗಡುವು ನೀಡಿದೆ. ಈ ನಡುವೆ ರಾಜ್ಯ ಸರ್ಕಾರ ಈ ಆದೇಶವನ್ನು ಚರ್ಚೆಗೆ ತರದೆ ಸ್ಪೀಡ್ ಗವರ್ನರ್ ಅಳವಡಿಸಿಕೊಳ್ಳಲು ಸೂಚಿಸಿದೆ. ಹೀಗಾದರೆ ಬೇರೆ ರಾಜ್ಯಗಳಿಗಿಂತ ಮೊದಲೇ ನಮ್ಮ ರಾಜ್ಯದಲ್ಲಿ ಅಳವಡಿಕೆ ಮಾಡಿದಂತಾಗುತ್ತದೆ. ಹೊಸ ಲಾರಿಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವುದು ಸೂಕ್ತ, ಆದರೆ ಹಳೆ ಲಾರಿಗಳಿಗೂ ಅಳವಡಿಸಲು ಸೂಚಿಸಿರುವುದು ಅವೈಜ್ಞಾನಿಕ ಎಂದರು.