ಬೆಂಗಳೂರು: ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಆಯುರ್ವೇದ ವೈದ್ಯರೊಬ್ಬರ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಂದ್ರಲೇಔಟ್ ನ ಗಂಗೊಂಡಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಆಯುರ್ವೇದ ವೈದ್ಯ ಹಾಗೂ ಪ್ರಾಧ್ಯಾಪಕರು ಆಗಿರುವ ಶ್ರೀಕಾಂತ್ ಸಜ್ಜನ್ ಅವರ ಪತ್ನಿ ಸ್ಮಿತಾ (30) ಮೃತರು. ದಂಪತಿ 7 ವರ್ಷಗಳ ಹಿಂದೆ ವಿವಾಹವಾಗಿದ್ದು ನಾಲ್ವರು ಮಕ್ಕಳಿದ್ದಾರೆ. ಗೃಹಿಣಿಯಾಗಿದ್ದ ಸ್ಮಿತಾ ಮಂಗಳವಾರ ಮಧ್ಯಾಹ್ನ ಸೀಲಿಂಗ್
ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಪತಿ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ.
ಘಟನೆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದು ಇನ್ನಿಬ್ಬರು ಮಕ್ಕಳ ಶಾಲೆಗೆ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮನೆಗೆ ಬಂದ ಶ್ರೀಕಾಂತ್, ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಕೂಡಲೇ ಕುಟುಂಬದ ಸದಸ್ಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಶವವನ್ನು
ರವಾನಿಸಿದರು.
ವರದಕ್ಷಿಣೆಗಾಗಿ ಶ್ರೀಕಾಂತ್‍ಸ್ಮಿತಾಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಈ ವಿಚಾರವಾಗಿ ಹಲವು ಬಾರಿ ಮಾತುಕತೆಗಳು ನಡೆದಿದ್ದವು. ಸ್ವಲ್ಪ ದಿನ ಸುಮ್ಮನಿರುತ್ತಿದ್ದ. ಬಳಿಕ ಮತ್ತೆ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ಸ್ಮಿತಾ ಪಾಲಕರು ಆರೋಪಿಸಿದ್ದಾರೆಂದು ಪೊಲೀಸರಿಗೆ ಹೇಳಿದ್ದಾರೆ.
ಪ್ರಕರಣ ಸಂಬಂಧ ಶ್ರೀಕಾಂತ್‍ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪ ಕಂಡು ಬಂದರೆ ಆತನ ಪಾಲಕರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.