ಧಾರವಾಡ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರ ಧಾರವಾಡದ ಸಾರಸ್ವತಪುರ ಮನೆಯನ್ನು ದೆಹಲಿ ಮೂಲದ ಮಹಿಳೆಯೊಬ್ಬರು ಮಂಗಳವಾರ ಖರೀದಿಸಿದ್ದಾರೆ.
ದೆಹಲಿ ನಿವಾಸಿ ಮಧು ಬಾಧುರಿ ಎಂಬವರು ಸುಮಾರು ಹತ್ತು ಗುಂಟೆ ಜಾಗದಲ್ಲಿರುವ ಕಾರ್ನಾಡ್ ಮನೆಯನ್ನು ರೂ 2 ಕೋಟಿಗೂ ಹೆಚ್ಚು ಹಣ ನೀಡಿ ಖರೀದಿಸಿದ್ದಾರೆಂದು ಮೂಲಗಳು ತಿಳಿಸಿವೆ. ಮಂಗಳವಾರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾರ್ನಾಡ ಮನೆಗೆ ಸಂಬಂಧಿಸಿದ ಕಾಗದಪತ್ರಗಳಿಗೆ ಸಹಿ ಹಾಕಿದರು. ಧಾರವಾಡದ ಸಂಸ್ಕೃತಿ, ಹವಾಮಾನ ತುಂಬ ಇಷ್ಟವಾಗಿದ್ದು, ಇಲ್ಲಿ ಮನೆ ಖರೀದಿಸಬೇಕೆಂಬ ಆಸೆ ಇತ್ತು. ಇದೀಗ ಕಾರ್ನಾಡರ ಅದ್ಭುತ ಮನೆಯೇ ಸಿಕ್ಕಿದ್ದು ತುಂಬಾ ಸಂತೋಷ ತಂದಿದೆ ಎಂದು ಮಧು ಬಾಧುರಿ ತಿಳಿಸಿದ್ದಾರೆ.