ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಚಾಲಕ ಕಂ ನಿರ್ವಾಹಕ ವಿನಾಯಕ ಮೂರ್ತಿ ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿಯಲ್ಲಿ ನಡೆದಿದೆ.
ಕೆಎಸ್‍ಆರ್‍ಟಿಸಿ ಡಿಪೊ 6ರಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವಿನಾಯಕ, ಸೋಮವಾರ ರಾತ್ರಿ ಮಲಗುವ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್ ನಿಗೆ ನೇಣು ಹಾಕಿಕೊಂಡಿದ್ದಾರೆ. ಕೊಠಡಿಯೊಳಗೆ ಹೋಗಿದ್ದ ಪತಿ ತುಂಬಾ ಹೊತ್ತಾದರೂ ಹೊರಗೆ ಬಾರದ ಕಾರಣ ಅನುಮಾನಗೊಂಡು ಕೊಠಡಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರು ಹಾಗೂ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಕೆಎಸ್‍ಆರ್‍ಟಿಸಿ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಚೌಡಯ್ಯ ಎಂಬುವರು ತನಗೆ ಕಿರುಕುಳ ನೀಡುತ್ತಿದ್ದಾರೆಂದು ವಿನಾಯಕ ಅವರು ಪತ್ನಿ ಬಳಿ ಹೇಳಿಕೊಂಡಿದ್ದರು. ಅಲ್ಲದೇ, ಕೆಲಸದ ವಿಚಾರವಾಗಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಚೌಡಯ್ಯ ಹೇಳಿದ್ದರು.
ಇದನ್ನು ತನ್ನ ಬಳಿ ಹೇಳಿಕೊಂಡಿದ್ದ ಅವರು ತೀವ್ರವಾಗಿ ನೊಂದಿದ್ದರು ಎಂದು ಪತ್ನಿ ಪೊಲೀಸರಿಗೆ ಹೇಳಿದ್ದಾರೆ. ಇನ್ನು ಕೆಎಸ್‍ಆರ್‍ಟಿಸಿ ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ದೀಪಾವಳಿ ಹಬ್ಬದ ನಂತರ ವಿನಾಯಕ ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಕೆಲ ದಿನಗಳ ಹಿಂದೆ ಕರೆದು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಚೌಡಯ್ಯ ಹೇಳಿದ್ದರು. ಇದರಿಂದಾಗಿ ವಿನಾಯಕ ಬೇಸರಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪತ್ನಿ ನೀಡಿದ ದೂರನ್ನು ಆಧರಿಸಿ ಚೌಡಯ್ಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ದೂರು ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಅಮೃತಹಳ್ಳಿ ಪೊಲೀಸರು ಹೇಳಿದ್ದಾರೆ.
ಕೆಎಸ್‍ಆರ್‍ಟಿಸಿ ಸ್ಪಷ್ಟನೆ
ವಿನಾಯಕ ಮೂರ್ತಿ ಯಾವುದೇ ಮಾಹಿತಿ ನೀಡದೆ ನ.14ರಿಂದ ನ.23ರವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಈ ಅವಧಿಯಲ್ಲಿ ಅವರು ಘಟಕಕ್ಕೂ ಭೇಟಿ ನೀಡಿಲ್ಲ. ಆತ್ಮಹತ್ಯೆ ಸಂಬಂಧ ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು ವಿಚಾರಣಾ ವರದಿ ಆಧರಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‍ಆರ್‍ಟಿಸಿ ಸಿಬ್ಬಂದಿ
ಪ್ರಕಟಣೆಯಲ್ಲಿ ಹೇಳಿದ್ದಾರೆ.