ಬೆಂಗಳೂರು: ಕೈಗಾರಿಕಾ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಸ್ಪರ್ಧಾತ್ಮಕತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿವಿಮಾತು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಕೆನರಾ ಬ್ಯಾಂಕ್ ಬುಧವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ `ಎಜುಕೇಶನ್ ಆ್ಯಂಡ್ ಪ್ರಾಕ್ಟೀಸಸ್' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚಿದ್ದು, ಸ್ಪರ್ಧಾತ್ಮಕ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ಬೆಳೆಸಬೇಕು. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಕೌಶಲ ಹೊಂದಿದವರಿಗೆ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗೆ ಸಿದ್ಧಪಡಿಸುವಂತೆ ಅಣಿಗೊಳಿಸಬೇಕು. ಈ ಮೂಲಕ ಕೈಗಾರಿಕೆಗೆ
ಅಗತ್ಯವಾದ ಮಾನವ ಸಂಪನ್ಮೂಲ ಒದಗಿಸುವ ಕೆಲಸ ಮಾಡಬೇಕು.
ನಿತ್ಯ ಹೊರಬರುವ ಹೊಸ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಕೈಗಾರಿಕಾಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು. ಅಭಿವೃದ್ಧಿಗೆ ಹೊಂದಿದ ದೇಶಗಳಲ್ಲಿ ಕೈಗಾರಿಕಾ ಕ್ಷೇತ್ರ ಜಿಡಿಪಿಗೆ ಶೇ.10-30 ರಷ್ಟು ಕೊಡುಗೆ ನೀಡುತ್ತಿದೆ. ಬೃಹತ್ ಉದ್ಯಮಗಳು ತರಬೇತಿ ಪಡೆದ ಮಾನವ ಸಂಪನ್ಮೂಲದ ಕೊರತೆ ಎದುರಿಸುತ್ತಿವೆ. ಉದ್ಯಮ ಸಂಸ್ಥೆಗಳು ನಿರ್ಧಾರ ಕೈಗೊಳ್ಳುವ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಸೂಕ್ತವಾಗಿ ನಿಭಾಯಿಸುವ ಸಾಮರ್ಥ್ಯವಿರುವ ಮಾನವ ಸಂಪನ್ಮೂಲದ ಅಗತ್ಯವಿರುತ್ತದೆ. ವಿವಿಗಳು ಹೊಸ ಕಾಲಕ್ಕೆ ತಕ್ಕಂತೆ ಪಠ್ಯ ರೂಪಿಸಿ, ಸಾಮಥ್ರ್ಯವಿರುವ ಮಾನವ ಸಂಪನ್ಮೂಲ ಸೃಷ್ಟಿ ಮಾಡಬೇಕು ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಶ್ರಾಂತ ಕುಲಪತಿ ಡಾ.ಎನ್.ಆರ್.ಶೆಟ್ಟಿ, ಸಿಐಎಂಎಸ್ ಅಧ್ಯಕ್ಷ ಕೆ.ಎಂ.ನಾಗರಾಜ್, ಕೆಪಿಪಿಜಿಸಿಎ ಅಧ್ಯಕ್ಷ ಕೃಷ್ಣ ರೆಡ್ಡಿ, ಸಿಐಎಂಎಸ್ ಕಾರ್ಯದರ್ಶಿ ಚಿಕ್ಕಣ್ಣ ಅವರನ್ನು ಸನ್ಮಾನಿಸಲಾಯಿತು.