ಬೆಂಗಳೂರು: ಬಿಬಿಎಂಪಿ ಗಾಡಿಗಳಿಗೆ ಕಸ ನೀಡುವಾಗ ವಿಂಗಡಿಸದಿದ್ದರೆ ಅನಿವಾರ್ಯವಾಗಿ ದಂಡ ವಿಧಿಸಬೇಕಾಗುತ್ತದೆ ಎಂದು ಮೇಯರ್ ಮಂಜುನಾಥ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಕಸ ವಿಲೇವಾರಿ ಮತ್ತು ವಿಂಗಡಣೆ ಕುರಿತು ಜಾಗೃತಿ ಮೂಡಿಸಲು ಸಂಚಾರಿ ಜಾಹೀರಾತು ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಬಿಬಿಎಂಪಿ ಕಸ ಗಾಡಿಗಳಿಗೆ ಕಸ ನೀಡುವಾಗ ಹಸಿ ಹಾಗೂ ಒಣ ತ್ಯಾಜ್ಯವಾಗಿ ವಿಂಗಡಣೆ ಮಾಡಿಯೇ ನೀಡಬೇಕು. ಸಾರ್ವಜನಿಕರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಮೊದಲಿಗೆ 10ಜಾಹೀರಾತು ವಾಹನಗಳು ದಕ್ಷಿಣ ವಲಯದಲ್ಲಿ ಸಂಚರಿಸಲಿವೆ. ನಂತರ ಎಲ್ಲ ವಲಯಗಳಲ್ಲಿ ಸಂಚರಿಸಿ ಅರಿವು ಮೂಡಿಸಲಾಗುವುದು. ಒಂದು ತಿಂಗಳ ಬಳಿಕವೂ ಕಸ ವಿಂಗಡಿಸದೇ ಇದ್ದರೆ ಭಾರಿಮೊತ್ತದ ದಂಡ ವಿಧಿಸಬೇಕಾಗುತ್ತದೆ ಎಂದರು.