ಬೆಂಗಳೂರು: ಕಾಕ್ಸ್‍ಟೌನ್ ಸಮೀಪದ ಜೀವನಹಳ್ಳಿಯಲ್ಲಿ ಯಲ್ಲಮ್ಮ ದೇವಿ ದೇವಾಲಯಕ್ಕೆ ನುಗ್ಗಿ ದೇವಿ ವಿಗ್ರಹ, ಮೂರು ತಾಳಿ ಹಾಗೂ ಹುಂಡಿಯನ್ನು ಕದ್ದೊಯ್ದಿದ್ದ 14 ವರ್ಷದ ಬಾಲಕ ಸೇರಿ ಇಬ್ಬರು ಆರೋಪಿಗಳನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಜೀವನಹಳ್ಳಿಯ ಮನೋಜ್ ಕುಮಾರ್ (19) ಬಂಧಿತ ಆರೋಪಿ. ಪರಿಚಿತ ಬಾಲಕನ ಜತೆ ಸೇರಿಕೊಂಡು, ನ.25ರ ರಾತ್ರಿ ದೇವಸ್ಥಾನದಲ್ಲಿ ಕಳವು ಮಾಡಿದ್ದ. ವ್ಯಾಸಂಗ ಬಿಟ್ಟಿದ್ದ ಇಬ್ಬರೂ,
ಕಾಕ್ಸ್‍ಟೌನ್‍ನಲ್ಲಿರುವ ತೃತೀಯ ಲಿಂಗಿಗಳ ಜತೆ ತಿರುಗಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ದೇವಸ್ಥಾನದ ಕಬ್ಬಿಣದ ಬಾಗಿಲು ಸಡಿಲವಾಗಿರುವುದನ್ನು ಗಮನಿಸಿದ್ದ ಆರೋಪಿಗಳು, ವಿಗ್ರಹ ಕಳವು ಮಾಡಲು ಸಂಚು ರೂಪಿಸಿದ್ದರು. ಸಾರ್ವಜನಿಕರ ಸಂಚಾರ ಕಡಿಮೆ ಆಗುತ್ತಿದ್ದಂತೆಯೇ, ಬಾಗಿಲು ಮುರಿದು 10 ಕೆ.ಜಿ ತೂಕದ ಪಂಚಲೋಹದ ವಿಗ್ರಹ, ತಾಳಿಗಳು ಹಾಗೂ ಹುಂಡಿಯನ್ನು ತೆಗೆದುಕೊಂಡು ಹೋ ಗಿದ್ದರು. ಮರುದಿನ ಬೆಳಿಗ್ಗೆ ಸ್ಥಳೀಯರು ದೇವಸ್ಥಾನಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು.