ಬೆಂಗಳೂರು: ರಾಜಕೀಯ ಒತ್ತಡಗಳಿಂದ ಬೇಸತ್ತು ಅನಿರ್ದಿಷ್ಟ ಕಾಲ ರಜೆಗೆ ಮುಂದಾಗಿದ್ದ ಖಡಕ್ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರಿಗೆ ರಾಜ್ಯ ಸರ್ಕಾರ ಮನವೊಲಿಕೆಗೆ ಮುಂದಾಗಿದೆ. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯಬೇಡಿ. ನಿಮಗೆ ಸರ್ಕಾರದ ಸಹಕಾರ ಇರುತ್ತದೆ ಎಂದು ಸರ್ಕಾರ ಅಭಯ ನೀಡಿದೆ. ಈ ಹಿನ್ನೆಲೆಯಲ್ಲಿ ಹರ್ಷಗುಪ್ತ ತಮ್ಮ ರಜೆ ಕೋರಿಕೆಯನ್ನು ವಾಪಸ್ ಪಡೆದಿದ್ದು, ಎಂದಿನಂತೆ ಸೇವೆಗೆ ಹಾಜರಾಗಲು ನಿರ್ಧರಿಸಿದ್ದಾರೆ. ಮೈಸೂರು ಪೇಪ್‍ರ್ ಮಿಲ್ ಎಂ.ಡಿ.ಯಾಗಿರುವ ಹರ್ಷ ಗುಪ್ತ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ನನೆ ರತ್ನಾಕರ್ ಸಾರ್ವಜನಿಕವಾಗಿ ನಿಂದಿಸಿದ ಕ್ರಮಕ್ಕೆಬೇಸತ್ತು ಸೇವೆಯಿಂದಲೇ ದೂರ ಉಳಿದಿದ್ದರು. ಸುಪ್ರೀಂ ಕೋರ್ಟ್‍ನ ಹಸಿರು ಪೀಠದಂತೆ ಕ್ರಮ ಕೈಗೊಂಡ ತಪ್ಪಿಗೆ ಟೀಕೆ, ನಿಂದನೆಗಳು ಹೆಚ್ಚಾ ಗಿದ್ದು, ಇದರಿಂದ ಬೇಸತ್ತು ರಜೆ ಹೋಗುತ್ತೇನೆ ಎಂದು ಅವರು ಸರ್ಕಾರಕ್ಕೆ ವಿನಂತಿಸಿದ್ದರು. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐಎಎಸ್ ಅಧಿಕಾರಿಗಳಾದ ರಶ್ಮಿ ಮಹೇಶ್, ರೋಹಿಣಿ ಸಿಂಧೂರಿ ಸೇರಿದಂತೆ ಕೆಲವು ಹಿರಿಯ ಅಧಿಕಾರಿ ಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲಎನ್ನುವ ಆಪಾದನೆ ಇದೆ. ಹರ್ಷಗುಪ್ತ ಬೇಸತ್ತು ಸಲ್ಲಿಸಿರುವ ಕೋರಿಕೆಯಂತೆ ರಜೆ ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕೆಲವು ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಹೇಳಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಹರ್ಷಗುಪ್ತ ಅವರೊಂದಿಗೆ ಚರ್ಚೆ ನಡೆಸಿ, ರಜೆ ಕೋರಿಕೆ ವಾಪಸ್ ಪಡೆಯುಂತೆ ಮಾಡಿದ್ದಾರೆ. ಯಾವುದೇ ರಾಜಕೀಯ ಒತ್ತಡ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ, ಎಂದಿನಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೂ ಭದ್ರಾವತಿಯಲ್ಲಿರುವ ಮೈಸೂರು ಪೇಪರ್ ಮಿಲ್ ಸಂಸ್ಥೆಗೆ ಸೇರಿದ ಕಾಗದದ ಕಾರ್ಖಾನೆಯನ್ನು ಸುಪ್ರೀಂ ಕೋರ್ಟ್‍ನ ಹಸಿರು ಪೀಠದ ಆದೇಶದಂತೆ ಬಂದ್ ಮಾಡಿರುವು ದನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದು, ಇದನ್ನು ವಾಪಸ್ ತೆಗೆಸುವಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಪ್ರಯತ್ನಿಸದೆ ಅಸಹಕಾರ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.