ಜಿಲ್ಲಾ ಸುದ್ದಿ

ಬೆಂಗಳೂರಲ್ಲಿ ಹುಕ್ಕಾ ಬಾರ್‍ಗಳ ದರ್ಬಾರ್

ಬೆಂಗಳೂರು: ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕರಿಗೆ ಹುಕ್ಕಾ ಸೇದಲು ಅನುಮತಿ ನೀಡುವುದಕ್ಕಾಗಿ ಪ್ರತ್ಯೇಕ ಪರವಾನಗಿ ಪಡೆಯುವ ಅಗತ್ಯವಿಲ್ಲ' ಎಂದು ಹೈಕೋರ್ಟ್ ಹೇಳಿ, ಆದೇಶ ಪ್ರತಿ ಹೊರಬೀಳುತ್ತಿದ್ದಂತೆ ಬೆಂಗಳೂರು ಮತ್ತು ನಗರದ ಸುತ್ತಮುತ್ತ ಅವ್ಯಾಹತವಾಗಿ ನಾಯಿಕೊಡೆಗಳಂತೆ ಹುಕ್ಕಾ ಬಾರ್ ಗಳು ತಲೆ ಎತ್ತಲು ತಯಾರಿ ನಡೆಸಿವೆ.

ಪ್ರಸ್ತುತ ಲಭ್ಯವಾದ ಮಾಹಿತಿ ಪ್ರಕಾರ ಹೈಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಕಳೆದೊಂದು ವಾರದಲ್ಲಿ 15ಕ್ಕೂ ಹೆಚ್ಚು ಹುಕ್ಕಾಬಾರ್ ಗಳು ನಗರದಲ್ಲಿ ಆರಂಭವಾಗಿದ್ದು, ಇನ್ನೂ ಲೆಕ್ಕವಿಲ್ಲದಷ್ಟು ಹುಕ್ಕಾಬಾರ್ ಆರಂಭಕ್ಕೆ ತಯಾರಿ ಆರಂಭವಾಗಿದೆ. ಇತ್ತೀಚಿನ ಯುವಜನತೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಹುಕ್ಕಾಬಾರ್ ತೆರೆಯುವ ಪ್ರಯತ್ನ ನಡೆದಿದೆ.

ಪ್ರಮುಖವಾಗಿ ಕಾಲೇಜುಗಳ ವ್ಯಾಪ್ತಿ, ನಗರದ ಹೊರವಲಯಗಳಲ್ಲಿ ಹುಕ್ಕಾಬಾರ್ ಆರಂಭಿಸುವ ಬೆಳವಣಿಗೆ ನಡೆದಿದ್ದು, ಅನೇಕ ಕಡೆ ಈಗಿರುವ ಹೋಟೆಲ್, ರೆಸ್ಟೋರೆಂಟ್, ಕಾಫಿಬಾರ್ ಗಳ ಜೊತೆಗೆ ಹುಕ್ಕಾ ಪಾಯಿಂಟ್ ತೆರೆದುಕೊಳ್ಳಲು ಇನ್ನೇನು ಬಹುದಿನಗಳಿಲ್ಲ.

ಕೋರ್ಟ್ ಆದೇಶ ತಂದ ಸ್ವತಂತ್ರ

ಡೈಮಂಡ್ ಎಂಟರ್ ಪ್ರೈಸಸ್ ಬ್ರ್ಯೂಸ್ ಎನ್ ಬೈಟ್ಸ್ ಹೆಸರಿನ ರೆಸ್ಟೋರೆಂಟ್ ಜಯನಗರದ 4ನೇ ಬ್ಲಾಕ್ ನಲ್ಲಿ ನಡೆಯುತ್ತಿತ್ತು. ಇಲ್ಲಿ ಕಾಫಿ ಮತ್ತು ಕುರುಕುಲು ತಿಂಡಿಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಗ್ರಾಹಕರಿಗೆ ಪ್ರತ್ಯೇಕ ಧೂಮಪಾನ ಮಾಡುವ ಸ್ಥಳದಲ್ಲಿ ಹುಕ್ಕಾ ಸೇದುವುದಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಮೈಕೋ ಲೇಔಟ್ ಉಪ ವಿಭಾಗದ
ತಿಲಕ್‍ನಗರ ಪೊಲೀಸರು ಈ ರೆಸ್ಟೋರೆಂಟ್, ಹುಕ್ಕಾ ಸೇದುವುದಕ್ಕೆ ಪ್ರತ್ಯೇಕ ಅನುಮತಿ ಪಡೆಯಬೇಕು ಎಂದು ಸೂಚಿಸಿದ್ದರು. ಈ ಸಂಬಂಧ ಅರ್ಜಿದಾರರು ಬಿಬಿಎಂಪಿಯನ್ನು ಸಂಪರ್ಕಿಸಿದಾಗ ಪ್ರತ್ಯೇಕ ಪರವಾನಗಿ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದು ಹೇಳಲಾಗಿತ್ತು.

ಆದರೆ ಪೊಲೀಸರು ಮಾತ್ರ ಭವಿಷ್ಯದ ಸ್ಥಿತಿಯನ್ನು ಅರಿತು ಸುಮ್ಮನಿರಲಿಲ್ಲ. ಈ ಕಾರಣಕ್ಕಾಗಿ ಅರ್ಜಿದಾರರು ಕೋರ್ಟ್‍ಗೆ ಮೊರೆ ಹೋಗಿದ್ದರು. ನಮ್ಮ ನಿತ್ಯದ ವ್ಯವಹಾರದಲ್ಲಿ ಪೊಲೀಸರು ಮೂಗು ತೂರಿಸುತ್ತಿದ್ದಾರೆ. ಇದರಿಂದ ನಮಗೆ ಅಡಚಣೆ ಉಂಟಾಗಿದೆ ಎಂದು ಆರೋಪಿಸಿದ್ದರು. ನಂತರ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠವು ಸೆಪ್ಟೆಂಬರ್ ಎರಡನೇ ವಾರದಲ್ಲಿ ಅರ್ಜಿಯನ್ನು ವಿಲೇವಾರಿ ಮಾಡಿ, ಹುಕ್ಕಾಗಳಲ್ಲಿ ಕೇವಲ ತಂಬಾಕನ್ನು ಮಾತ್ರವೇ ಮಿಶ್ರಣ ಮಾಡಿರಬೇಕು. ಬೇರೆ ಇನ್ನಾವುದೇ ನಿಷೇಧಿತ ಮಾದಕ ದ್ರವ್ಯಗಳನ್ನು ತುಂಬಿರಬಾರದು. ಒಂದು ವೇಳೆ ಪೊಲೀಸರಿಗೆ ಈ ಸಂಬಂಧ ಏನಾದರೂ ವಿಶ್ವಾಸಾರ್ಹ ಮಾಹಿತಿ ದೊರೆತರೆ, ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಗೊತ್ತಾದರೆ ಅಂತಹ ರೆಸ್ಟೋರೆಂಟ್‍ಗಳ ಮೇಲೆ ದಾಳಿ ಮಾಡಲು ಸ್ವತಂತ್ರರು' ಎಂದು ಹೇಳಿತು.

SCROLL FOR NEXT