ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ದಿನಾಂಕ ಬದಲಾವಣೆ ಮಾಡಿದ್ದ ಸರ್ಕಾರ ಸಾರ್ವಜನಿಕರು ಮತ್ತು ರಾಜಮನೆತನದ ವಿರೋಧಕ್ಕೆ ಮಣಿದು ಮತ್ತೆ ಅಕ್ಟೋಬರ್ 23 ರಂದು ಅಂದರೇ ವಿಜಯದಶಮಿಯಂದೇ ಜಂಬೂಸವಾರಿ ನಡೆಸಲು ನಿರ್ಧರಿಸಿದೆ.
ಮೈಸೂರು ಅರಮನೆ ಜ್ಯೋತಿಷಿಗಳ ಸಲಹೆಯಂತೆ ಅಕ್ಟೋಬರ್ 22ರಂದೇ ವಿಜಯದಶಮಿ ಮತ್ತು ಜಂಬೂಸವಾರಿ ನಡೆಸುವುದಾಗಿ ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದರು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಮೈಸೂರು ಜನರು ಹಾಗೂ ರಾಣಿ ಪ್ರಮೋದಾದೇವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಒಂದು ದಿನ ಮುಂಚಿತವಾಗಿ ಜಂಬೂ ಸವಾರಿ ನಡೆಯುವ ಕುರಿತಾಗಿ ಗೊಂದಲ ನಿರ್ಮಾಣವಾಗಿ ರಾಜಮನೆತನ ಮತ್ತು ಸರ್ಕಾರದ ಭಾನುವಾರ ಸಭೆ ನಡೆಸಿತು.
ಸಭೆಯಲ್ಲಿ ರಾಣಿ ಪ್ರಮೋದಾದೇವಿ ಮತ್ತು ಸರ್ಕಾರದ ಪರವಾಗಿ ಸಚಿವ ವಿ.ಶ್ರೀನಿವಾಸ್ ಅವರು ಪಾಲ್ಗೊಂಡಿದ್ದರು. ಜ್ಯೋತಿಷಿಗಳ ಮಾತು ಕೇಳಿ ರಾಜ್ಯ ಸರ್ಕಾರ ಆಯುಧಪೂಜೆಯ ದಿನದಂದೇ ಜಂಬೂಸವಾರಿ ನಡೆಸುವ ತೀರ್ಮಾನ ಮಾಡಿದೆ ಎಂಬ ಮಾತುಗಳು ಕೇಳಿಬಂದಿದ್ದು, ಇದಕ್ಕೆ ಇತಿಹಾಸ ತಜ್ಞರಿಂದ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಹೀಗಾಗಿ ಸರ್ಕಾರ ವಿಜಯ ದಶಮಿಯಂದೇ ಜಂಬೂ ಸವಾರಿ ನಡೆಸಲು ತೀರ್ಮಾನಿಸಿದೆ.