ಬೆಂಗಳೂರು: ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ರೈತ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾದ ರೈತರ ನಿಯೋಗವು ಚರ್ಚೆ ನಡೆಸಿ, ರೈತರ ಬೇಡಿಕೆಗಳನ್ನು ಮಂಡಿಸಿತು. ಪ್ರತಿ ರೈತರೂ ಕಡ್ಡಾಯ ವಿಮೆ ಮಾಡಿಸುವಂತಾಗಬೇಕು, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರ ಆತ್ಮಹತ್ಯೆತಡೆಗಟ್ಟಲು ರಾಜ್ಯ ಮಟ್ಟದಲ್ಲಿ ತಕ್ಷಣವೇ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಪರಿಹಾರಕ್ಕೆ ಸಂಬಂಧಿಸಿ ತೆಲಂಗಾಣ ಮಾದರಿ ಪರಿಹಾರ ನೀಡಬೇಕು ಎಂದು
ಒತ್ತಾಯಿಸಿದರು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು, ತಕ್ಷಣವೇ ರೈತರಿಗೆ 1 ಲಕ್ಷ ರೂಪಾಯಿಸಾಲವನ್ನು ಬ್ಯಾಂಕುಗಳಿಂದ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೇಂದ್ರದತ್ತ ಬೊಟ್ಟು ಮಾಡದೇ ಮೊದಲು ಸರ್ಕಾರ ಸಾಲ ಮನ್ನಾ ಮಾಡಬೇಕು, ನಂತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವಂತೆ ಕೇಂದ್ರವನ್ನು ಕೇಳುವ ನೈತಿಕತೆ ಬರುತ್ತದೆ ಎಂದು ಸಭೆ ನಂತರ ಮುಖಂಡರು ಹೇಳಿದರು. ರೈತ ಮುಖಂಡ ಕಡಿದಾಳು ಶಾಮಣ್ಣ, ಕರಬೂರು ಶಾಂತಕುಮಾರ್,
ಚಾಮರಸ ಪಾಟೀಲ್, ಬಡಗಲಪುರ ನಾಗೇಂದ್ರ ಸಭೆಯಲ್ಲಿದ್ದರು.
ಬೆಂಬಲ ಬೆಲೆ ನಿಗದಿಪಡಿಸುವ ವಿಚಾರದಲ್ಲಿ ರೈತರು ಸಭೆಯಲ್ಲಿ ಆಕ್ಷೇಪ ಎತ್ತಿದ ಪ್ರಸಂಗ ನಡೆಯಿತು. ಕೇಂದ್ರ ಸರ್ಕಾರದ ಮಾನದಂಡಗಳನ್ನು ತೋರಿಸುವ ರಾಜ್ಯದ ಕ್ರಮ ಸರಿಯಲ್ಲ. ರೈತನಿಗಾಗುವ ಕನಿಷ್ಟ ಲೆಕ್ಕ ಹಾಕಿ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಕೆಲವು ರೈತರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಅಧಿಕೃತವಾದ ಬೆನ್ನಲ್ಲೇ ಇದುವರೆಗೆ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಎಷ್ಟು ಎಂಬುದನ್ನು ಸರ್ಕಾರವೇ ಬಹಿರಂಗಗೊಳಿಸಿದೆ. ರಾಜ್ಯದಲ್ಲಿ ಇದುವರೆಗೆ 507 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 101 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಜುಲೈನಲ್ಲಿ 205 ಮತ್ತು ಆಗಸ್ಟ್ ತಿಂಗಳಲ್ಲಿ 200 ಆತ್ಮಹತ್ಯೆಪ್ರಕರಣಗಳು ವರದಿಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics