ಬೆಂಗಳೂರು: ನ್ಯಾಸ್ಕಾಂ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದ ಬೆನ್ನಲ್ಲೇ ರಾಜ್ಯಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೂ ರಾಜ್ಯಕ್ಕೆ ಆಗಮಿಸುತ್ತಿದ್ದು, ನವ ಉದ್ಯಮಿಗಳೊಂದಿಗೆ ಚರ್ಚಿಸಲು ರಾಹುಲ್ ಅವರಿಗೂ ವೇದಿಕೆ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಘಟಕ ಸಿದ್ಧತೆ ನಡೆಸಿದೆ.
ಹೌದು, ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರೂ ನವ ಉದ್ಯಮಿಗಳ ಜತೆಗೆ (ಸ್ಟಾರ್ಟ್ ಅಪ್ಸ್ ) ಜತೆಗೆ ಚರ್ಚೆ ನಡೆಸಬೇಕು. ಆ ಮೂಲಕ ಅದೊಂದು ರಾಷ್ಟ್ರೀಯ ಮಟ್ಟದ ಪ್ರಚಾರ ಪಡೆಯಬೇಕೆಂಬ ಇರಾದೆ ಕಾಂಗ್ರೆಸ್ ನಾಯಕರಾಗಿದೆ. ಇದಕ್ಕಾಗಿ ಸದ್ದಿಲ್ಲದೇ
ಪ್ರಯತ್ನಗಳೂ ನಡೆಯುತ್ತಿವೆ. ಆದರೆ ರೈತರಿಗೆ ಸಾಂತ್ವನ ಹೇಳುವ ಉದ್ದೇಶಕ್ಕೆ ರಾಜ್ಯಕ್ಕೆ ಬರುತ್ತಿರುವ ರಾಹುಲ್ ಗಾಂಧಿ ಉದ್ಯಮಿಗಳ ಜತೆಗೆ ಮಾತನಾಡುವ ಅಗತ್ಯವಿಯೇ? ಎಂಬ ಪ್ರಶ್ನೆಗಳೂ ಇದೇ ವೇಳೆ ಎದ್ದಿವೆ.
ನವ-ಉದ್ಯಮಿಗಳ ಜತೆಗೆ ರಾಹುಲ್ ವೇದಿಕೆ ಹಂಚಿಕೊಳ್ಳುವ ಕಾರ್ಯಕ್ರಮವನ್ನು ಆಂಯೋಜಿಸುವ ಹೊಣೆಯನ್ನು ರಾಜ್ಯದ ಸಚಿವರೊಬ್ಬರಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ. ಅವರು ಈ ಜವಾಬ್ದಾರಿಯನ್ನು ತಮಗೆ ಆತ್ಮೀಯರಾದ ಮುಂಬಯಿ ಮೂಲದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ನೀಡಿದ್ದಾರೆ. ಈ ಸಂಸ್ಥೆ ರಾಜ್ಯದ 35 ಯುವ ಉದ್ಯಮಿಗಳನ್ನು ಮೈತ್ರ ಚರ್ಚೆಗೆ ಆಯ್ಕೆ ಮಾಡಿಕೊಂಡಿದೆ. ಆದರೆ, ``ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ,' ಎಂದು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಐಟಿ-ಬಿಟಿ ಸಚಿವ ಡಾ.ಎಸ್.ಆರ್. ಪಾಟೀಲ್ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.