ಬೆಂಗಳೂರು :ಬೌರಿಂಗ್ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಕಳವಾಗಿದ್ದ ಮಗು ಶಿವಮೊಗ್ಗದಲ್ಲಿ ಪತ್ತೆಯಾಗಿದೆ.ನವಜಾತ ಶಿಶು ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ್ದು, ತಾಯಿ-ಮಗುವನ್ನು ಒಂದು ಮಾಡಿದ್ದಾರೆ. ಈ ಮೂಲಕ ಮಗುವಿನ ತಾಯಿ ಹಾಗೂ ಕುಟುಂಬ ಸದಸ್ಯರಲ್ಲಿದ್ದ ದುಃಖವನ್ನು ದೂರ ಮಾಡಿದ್ದಾರೆ.
ಮಗು ಶಿವಮೊಗ್ಗದ ಸಾಗರ ತಾಲೂಕಿನ ಕಾಗೆಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ. ಮಗುವನ್ನು ಅಪಹರಿಸಿದ್ದ ಜುಬೀನಾ ಹಾಗೂ ಆಕೆಯ ಸಹೋದರ ಖರೀಮ್ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರನ ಮನೆಯಲ್ಲಿ ಮಗು: ಮಗುವನ್ನು ಕಳವು ಮಾಡಿದ್ದ ಮಹಿಳೆ ಮಗುವನ್ನು ಶಿವಮೊಗ್ಗದಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಇಟ್ಟಿದ್ದಳು. ಅ.4ರಂದು ಮಗು ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು.
ಮಗು ಶಿವಮೊಗ್ಗದಲ್ಲಿ ಇದೆ ಎಂಬುದನ್ನು ಪತ್ತೆ ಮಾಡಿದ ಪೊಲೀಸರು ಮಗುವನ್ನು ವಶಕ್ಕೆ ಪಡೆಯಲು ಅಲ್ಲಿಗೆ ತೆರಳಿದಾಗ ಮನೆಯಲ್ಲಿ ಆರೋಪಿಗಳು ಇರಲಿಲ್ಲ. ಆರೋಪ್ಯ ಅತ್ತಿಗೆ ಮಾತ್ರ ಇದ್ದರು. ಆಕೆ ತನಗೆ ಏನು ಗೊತ್ತಿಲ್ಲ ಎಂದು ಹೇಳಿದ ಕಾರಣ ಮಗುವನ್ನು ಒಂದು ತಂಡ ಬೆಂಗಳೂರಿಗೆ ಕರೆ ತಂದು ತಾಯಿ ಮಡಿಲಿಗೆ ಒಪ್ಪಿಸಿದೆ. ಮತ್ತೊಂದು ತಂಡ ಆರೋಪಿಗಳಿಗೆ ಬಲೆ ಬೀಸಿದ್ದು, ಶಿವಮೊಗ್ಗದಲ್ಲೇ ಬೀಡುಬಿಟ್ಟಿದೆ. ಮಗುವನ್ನು ರಕ್ಷಿಸಿ ಆಂಬ್ಯುಲೆನ್ಸ್ ನ ಮೂಲಕ ಬೆಂಗಳೂರಿಗೆ ಕರೆತಂದು ತಾಯಿಗೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಗುವಿಗೆ ಕೆಲವು ಪರೀಕ್ಷೆಗಳನ್ನು ನಡೆಸಿದ್ದು ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಕಾಡುಗೋಡಿಯ ವರದಾಚಾರ್ ರಸ್ತೆ ನಿವಾಸಿ ಸೈಯದ್ ಹಬೀಬ್ ಪತ್ನಿ ಫರೀದಾ ಅ.2 ರಂದು ಬೌರಿಂಗ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 12.30ರಲ್ಲಿ ಮಗು ನೋಡುವ ನೆಪದಲ್ಲಿ ಬಂದ ಬುರ್ಖಾ ಧರಿಸಿದ್ದ ಮಹಿಳೆ ಮಗುವನ್ನು ಅಪಹರಿಸಿ ಪರಾರಿಯಾಗಿದ್ದಳು.
ಸುಮಾರು 15 ನಿಮಿಷದ ನಂತರ ಮಗು ಕಾಣೆಯಾಗಿದ್ದನ್ನು ಗಮನಿಸಿದ ಪೋಷಕರು ಆಸ್ಪತ್ರೆಯಲ್ಲಿ ಹುಡುಕಾಡಿ ನಂತರ ಪೊಲೀಸರಿಗೆ ತಿಳಿಸಿದ್ದರು. ತನಿಖೆ ಕೈಗೊಂಡಿದ್ದ ಪೊಲೀಸರು ಬೌರಿಂಗ್ ಆಸ್ಪತ್ರೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬುರ್ಖಾಧಾರಿಯಾದ ಮಹಿಳೆಯೊಬ್ಬಳು ಮಗುವನ್ನು ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿತ್ತು.