ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದು ಭಾನುವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ಮತ್ತು ವಿದ್ಯಾರಣ್ಯಪುರದಲ್ಲಿ ಇಬ್ಬರು ಮಹಿಳೆಯರಿಂದ ಸರ ಕಳವು ಮಾಡಿರುವ ಇಬ್ಬರು ದುಷ್ಕರ್ಮಿಗಳು ಪೀಣ್ಯದಲ್ಲಿ ಮಹಿಳೆಯ ಸರ ಅಪಹರಣಕ್ಕೆ ಯತ್ನಿಸಿ ಪರಾರಿಯಾಗಿದ್ದಾರೆ.
ವಿದ್ಯಾರಣ್ಯಪುರ ಬಿಇಎಲ್ 3ನೇ ಬ್ಲಾಕ್ ನಿವಾಸಿ ಭಾನುಮತಿ (65) ಎಂಬುವರು ಸರ ಕಳೆದುಕೊಂಡ ಮಹಿಳೆ. ಭಾನುಮತಿ ಅವರು ತರಕಾರಿ ತರಲು ಸಮೀಪದ ಅಂಗಡಿಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿ 70 ಗ್ರಾಂ ಸರ ಕಿತ್ತುಕೊಂಡು ಸ್ವಲ್ಪ ದೂರದಲ್ಲಿ ಪಲ್ಸರ್ ಬೈಕ್ ನಿಲ್ಲಿಸಿಕೊಂಡಿದ್ದ ಮತ್ತೊಬ್ಬನ ಜತೆ ಪರಾರಿಯಾಗಿದ್ದಾನೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮಾಕ್ಷಿಪಾಳ್ಯ: ಮಧ್ಯಾಹ್ನ 1.35ರ ಸುಮಾರಿಗೆ ಕಾಮಾಕ್ಷಿಪಾಳ್ಯ ಸಮೀಪದ ಬಿಡಿಎ ಲೇಔಟ್‍ನ ಲತಾ (45) ಎಂಬುವರು ಸಮೀಪದ ಅಂಗಡಿಯಿಂದ ತರಕಾರಿ ಖರೀದಿಸಿ ಮನೆಗೆ ಮರಳುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಲತಾ ಅವರ 100 ಗ್ರಾಂ ಚಿನ್ನದ ಸರ ದೋಚಿದ್ದಾನೆ.
ಇದಕ್ಕೂ ಮೊದಲು ಮಹಿಳೆ ಬಳಿ ಬಂದ ದುಷ್ಕರ್ಮಿಗಳು ತಾವು ಟಾಟಾ ಸ್ಕೈನವರು ನಿಮ್ಮ ಮನೆಯಲ್ಲಿರುವ ಟಾಟಾ ಸ್ಕೈ ಕೆಟ್ಟು ಹೋಗಿದೆ ಎನ್ನುವ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ. ಆಗ, ಲತಾ ಅವರು ತಮ್ಮ ಮನೆಯಲ್ಲಿ ಟಾಟಾ ಸ್ಕೈ ಇಲ್ಲ ಎಂದಿದ್ದಾರೆ. ಬಳಿಕ ಅಲ್ಲಿಂದ ಮುಂದಕ್ಕೆ ಹೋದ ದುಷ್ಕರ್ಮಿಗಳು ವಾಪಸ್ ಬೈಕ್ ತಿರುಗಿಸಿಕೊಂಡು ಬಂದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸಿಸಿ ಕ್ಯಾಮೆರಾದಲ್ಲಿ ಸೆರೆ: ಸಮೀಪದ ಶಾಲೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ದುಷ್ಕರ್ಮಿಗಳಿಬ್ಬರು ಬೈಕ್ ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ, ವಾಹನದ ಸಂಖ್ಯೆ ಸ್ಪಷ್ಟವಾಗಿ ಕಾಣಿಸಿಲ್ಲ. ಹೀಗಾಗಿ, ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ದುಷ್ಕರ್ಮಿಗಳು ಕಪ್ಪು ಪಲ್ಸರ್ ಬೈಕ್‍ನಲ್ಲಿ ಬಂದಿದ್ದು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ. ಪೀಣ್ಯದ ಎಂವಿಐ ಲೇಔಟ್‍ನಲ್ಲಿ ರಮಾಲಕ್ಷ್ಮಮ್ಮ (65) ಎಂಬುವರು ಮನೆ ಮುಂದೆ ನಿಂತಿದ್ದರು. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಅವರ ಬಳಿ ತೆರಳಿದ ದುಷ್ಕರ್ಮಿ ರಮಾಲಕ್ಷ್ಮಮ್ಮ ಅವರ ಕುತ್ತಿಗೆಯಲ್ಲಿದ್ದ ಸರಕ್ಕೆ ಕೈ ಹಾಕಿದ್ದ. ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಲಕ್ಷ್ಮಮ್ಮ ಕೂಗಿಕೊಂಡಿದ್ದಾರೆ. ರಮಾ ಅವರ ಕಿರುಚಾಟ ಕೇಳಿ ಮನೆಯಲ್ಲಿದ್ದ ಕುಟುಂಬ ಸದಸ್ಯರು ಹೊರಬರುತ್ತಿದ್ದಂತೆ ಹೆದರಿದ ಆರೋಪಿ ಸರ ಬಿಟ್ಟು ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಮತ್ತೊಬ್ಬನ ಜತೆ ಪರಾರಿಯಾಗಿದ್ದಾನೆ. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಕಾಬಂಧಿ: ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನಗರದಾದ್ಯಂತ ನಾಕಾಬಂಧಿ ಬಿಗಿಗೊಳಿಸಿ ಬೈಕ್‍ಗಳ ತಪಾಸಣೆ ನಡೆಸುವಂತೆ ಅಲರ್ಟ್ ಮಾಡಿದ್ದರು. ಸಂಬಂಧಪಟ್ಟ ವಿಭಾಗದ ಡಿಸಿಪಿಗಳು ಖುದ್ದು ಘಟನಾ ಸ್ಥಳಕ್ಕೆ ತೆರಳಿ ಸರ ಕಳೆದುಕೊಂಡವರಿಂದ ಮಾಹಿತಿ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics