ಮಡಿಕೇರಿ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾರುವ ಘಟನೆ ಮಡಿಕೇರಿ ಸಮೀಪ ಬೋಯಿಕೇರಿಯ ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ.
ಬೊಯಿಕೇರಿ ಗ್ರಾಮದ ಆಶಾ (50) ಮೃತ ಮಹಿಳೆ. ನಿಧಿಯ ಆಸೆಗಾಗಿ ಆಶಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆಶಾ ಅವರು ಇಬ್ನಿವಳವಾಡಿಯ ಧರಣಿ ಎಂಬುವರ ಮನೆಯಲ್ಲಿ ಮೃತಪಟ್ಟಿದ್ದಾರೆ. ಎಡ ಕೈಯಲ್ಲಿ ಸುಟ್ಟಗಾಯದ ಗುರುತುಗಳು ಕಂಡು ಬಂದಿವೆ.
ಆಶಾ ಅವರ ಮೈಮೇಲೆ ಅಘೋಚರ ಶಕ್ತಿ ಬರುತ್ತಿತ್ತು ಎನ್ನಲಾಗಿದ್ದು, ಇದನ್ನು ಬಿಡಿಸುವ ಸಲುವಾಗಿ ಶ್ರೀದುರ್ಗಾ ದತ್ತ ಕಾಳಿದಾಸ ಸ್ವಾಮಿ ವಾಸವಿದ್ದ ಮನೆಗೆ ಧರಣಿ ಬರುತ್ತಿದ್ದರು. ಶ್ರೀದುರ್ಗಾದತ್ತ ಕಾಳಿದಾಸ ಸ್ವಾಮಿ ಪೂಜೆ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದ ಎನ್ನಲಾಗಿದ್ದು, ಪ್ರತಿ ಭಾನುವಾರ ಇಲ್ಲಿ ಪೂಜೆ ನಡೆಯುತ್ತಿತ್ತು.
ಅ.11 ರ ಭಾನುವಾರ ಕೂಡ ಅದೇ ರೀತಿ ಹಗಲು ಪೂಜೆ ನಡೆದಿದೆ. ಪೂಜೆಯಲ್ಲಿ ಪಾಲ್ಗೊಂಡಿದ್ದ ಆಶಾ ರಾತ್ರಿ ವೇಳೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದರು. ಅಲ್ಲದೆ ಮಧ್ಯರಾತ್ರಿ ಅಘೋಚರ ಶಕ್ತಿ ಮೈಮೇಲೆ ಬಂದಿತ್ತೆಂದು ಹೇಳಲಾಗಿದೆ. ಈ ಸಂದರ್ಭ ಮೈಮೇಲಿನ ಶಕ್ತಿಯನ್ನು ಬಿಡಿಸಲೆಂದು ಆಶಾ ಅವರ ಮೇಲೆ ಚಾಟಿ ಪ್ರಹಾರ ಮಾಡಿದ್ದು, ನೋವು ತಾಳಲಾರದೆ ಮೂರ್ಛೆ ಬಿದ್ದಿದ್ದರು ಎಂದು ಆರೋಪಿಸಲಾಗಿದೆ.
ಅ.12ರ ಬೆಳಗ್ಗೆ ಧರಣಿ ಅವರು ಪೂಜೆ ಕೋಣೆಯಲ್ಲಿ ಬಂದು ನೋಡಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ, ನಿಧಿಯ ಆಸೆಗಾಗಿ ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದರು. ಆಶಾ ಸಹೋದರ ನೀಡಿದ ದೂರಿನನ್ವಯ ಕೊಲೆ ಎಂದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖ ಲಿಸಿಕೊಂಡಿದ್ದಾರೆ.
ದುರ್ಗಾದತ್ತ ಕಾಳಿದಾಸ ಸ್ವಾಮಿ, ಧರಣಿ, ಮಕ್ಕಳಾದ ಕವನ್ ಕಾರ್ಯಪ್ಪ ಹಾಗೂ ಭುವನ್ ಚಂಗಪ್ಪ ಎಂಬವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸ್ವಾಮಿಯಾಗಿ ಪರಿವರ್ತನೆ: ಸಿದ್ದಾಪುರದ ಕೆ. ಮಹಮ್ಮದ್ ಇಕ್ಬಾಲ್ ಎಂಬಾತ ಮೇ 19 ರಂದು ಶ್ರೀದುರ್ಗಾದತ್ತ ಕಾಳಿದಾಸ ಸ್ವಾಮಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದ. ಇಬ್ನಿವಳವಾಡಿ ಗ್ರಾಮದಲ್ಲಿ ಕಳೆದ 2 ವರ್ಷಗಳಿಂದ ಧರಣಿ ಅವರಿಗೆ ಸೇರಿದ ಮನೆಯಲ್ಲಿ ಮಹಮ್ಮದ್ ಇಕ್ಬಾಲ್ ನೆಲೆಸಿದ್ದ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics