ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸೇರಿದಂತೆ ಅಭಿಮಾನ್ ಸ್ಟುಡಿಯೋಗೆ ಮಂಜೂರು ಮಾಡಿದ್ದ 10 ಎಕರೆ ಜಮೀನನ್ನು ಹಿಂಪಡೆಯುವುದಾಗಿ ಸರ್ಕಾರ ಹೊರಡಿಸಿದ್ದ ನೋಟಿಸ್ ಪ್ರಶ್ನಿಸಿ ನಟ ಟಿ.ಎನ್.ಬಾಲಕೃಷ್ಣರ ಪುತ್ರರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೆ, ಸರಕಾರ ಸ್ಮಾರಕಕ್ಕೆ ಎರಡು ಎಕರೆ ಸೇರಿದಂತೆ ಒಟ್ಟು 10 ಎಕರೆಯನ್ನು ಹಿಂಪಡೆಯುವುದಾಗಿ ಸೆ.18ರಂದು ನೋಟಿಸ್ ಜಾರಿಮಾಡಿ ನಮ್ಮ ವಶದಲ್ಲಿದ್ದ ಜಮೀನನ್ನು ಕಾನೂನು ಬಾಹಿರವಾಗಿ ಹಿಂಪಡೆಯುವುದಕ್ಕೆ ಸರಕಾರ ಮುಂದಾಗಿದೆ ಎಂದು ಬಾಲಕೃಷ್ಣ ಪುತ್ರರಾದ ಬಿ.ಗಣೇಶ್ ಮತ್ತು ಬಿ. ಶ್ರೀನಿವಾಸ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.