ಎಸಿ ಆದೇಶ ರದ್ದುಪಡಿಸಿದ ಕೋರ್ಟ್
ನಗರದ ಕಾಡುಗೋಡಿಯ ಸರ್ವೇ ನಂ. 1ರಲ್ಲಿನ 711 ಎಕರೆ ಜಮೀನನ್ನು ಅರಣ್ಯ ಪ್ರದೇಶ ಎಂದು ತೀರ್ಮಾನಿಸಿ ಮತ್ತು ಆ ಜಮೀನು ಅರಣ್ಯ ಇಲಾಖೆಗೆ ವರ್ಗಾವಣೆ...
ಬೆಂಗಳೂರು: ನಗರದ ಕಾಡುಗೋಡಿಯ ಸರ್ವೇ ನಂ. 1ರಲ್ಲಿನ 711 ಎಕರೆ ಜಮೀನನ್ನು ಅರಣ್ಯ ಪ್ರದೇಶ ಎಂದು ತೀರ್ಮಾನಿಸಿ ಮತ್ತು ಆ ಜಮೀನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿ ಬೆಂಗಳೂರು ಉತ್ತರ ತಾಲೂಕಿನ ಉಪ ವಿಭಾಗದ ಎಸಿಯವರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಎಸಿ ಆದೇಶ ಪ್ರಶ್ನಿಸಿ ಕಾನ್‍ಕಾರ್ಡ್ ಕಂಪೆನಿ, ಮೆಸ್ ಇಂಡಿಯಾ ಸಾಟ್‍ಕಾಂ ಸೇರಿದಂತೆ ಇನ್ನಿತರ ಕಂಪನಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ಏಕ ಸದಸ್ಯ ಪೀಠ ಆದೇಶ ರದ್ದುಗೊಳಿಸಿತು. ಕಂದಾಯ ಇಲಾಖೆಯು ಜಮೀನನ್ನು ಅರಣ್ಯ ಪ್ರದೇಶ ಎಂದು ತೀರ್ಮಾನಿಸಿ, ಅದನ್ನು ಇಲಾಖೆಯ ಸ್ವಾಧೀನಕ್ಕೆ ನೀಡಬೇಕಿದ್ದರೆ ಮೊದಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. ಅಲ್ಲಿವರೆಗೆ ಯಾವುದೇ ಆದೇಶ ಹೊರಡಿಸುವ ಅಧಿಕಾರ ಕಂದಾಯ ಇಲಾಖೆಗೆ ಇರುವುದಿಲ್ಲ ಎಂದರು.
ಪ್ರಕರಣದಲ್ಲಿ ಎಸಿ ಅವರು ಈ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ, ಜಮೀನನ್ನು ಮ್ಯೂಟೇಷನ್ ಮಾಡುವಂತೆ 2015 ರ ಏ.23ರಂದು ಆದೇಶಿಸಿದ್ದರು. ಈ ಆದೇಶ ಹೊರಡಿಸುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ. ಹೀಗಾಗಿ, ಎಸಿ ಆದೇಶ ಕಾನೂನು ಬಾಹಿರಎಂದು ಹೇಳಿದ ನ್ಯಾಯಮೂರ್ತಿ ಅವರು, ಸಹಾಯಕ ಆಯುಕ್ತರ ಆದೇಶ ರದ್ದುಗೊಳಿಸಿದರು.
ಅಲ್ಲದೆ, ಕೆಐಎಡಿಬಿ ಈ ಜಾಗವನ್ನು ವಶಪಡಿಸಿಕೊಂಡು ನಂತರ ಕೈಗಾರಿಕಾ ಕಂಪೆನಿಗಳಿಗೆ ಮಂಜೂರು ಮಾಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಿಭಾಗೀಯ ಪೀಠದ ಆದೇಶಗಳ ಮಾನ್ಯ ಮಾಡಿವೆ. ಇದರ ಹೊರತಾಗಿಯೂ ಈ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದ ಸಹಾಯಕ ಆಯುಕ್ತ ಮಹೇಶ್ ಬಾಬು ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಮೂರ್ತಿಗಳು ಇದೇ ವೇಳೆ ನಿರ್ದೇಶಿಸಿದ್ದಾರೆ.