ಮಂಡ್ಯ: ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಮ್ಮ ರಾಜ್ಯದಲ್ಲಿ ಶೇಕಡಾ 75ರಷ್ಟು ರೈತರು ಬ್ಯಾಂಕ್ ಗಳಿಂದ ಸಾಲ ತೆಗೆದುಕೊಂಡಿದ್ದಾರೆ. ಹಾಗಾಗಿ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಗೆ ಹೇಳಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಪ್ರತಿಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ತಡೆಯಲು, ಅವರ ತೊಂದರೆಗಳಿಗೆ ಸ್ಪಂದಿಸಲು ಈಗಾಗಲೇ ಹಲವು ಕ್ರಮ ಕೈಗೊಂಡಿದೆ. ಬ್ಯಾಂಕ್ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದರು. ಮುಖ್ಯಮಂತ್ರಿ ಬದಲಾವಣೆ ಕುರಿತು ಕೆಲವು ದಿನಗಳಿಂದ ಕೇಳಿಬರುತ್ತಿರುವ ವದಂತಿ ಕುರಿತು ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದರು.