ಬೆಂಗಳೂರು: ಬಿಬಿಎಂಪಿಯ ಆಸ್ತಿ ತೆರಿಗೆ ಪರಿಷ್ಕರಣೆ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, 2016 ರ ಏಪ್ರಿಲ್ 1 ರಿಂದ ಹೊಸ ದರದ ಹೊರೆ ನಗರ ನಿವಾಸಿಗಳ ಮೇಲೆ ಬೀಳಲಿದೆ. ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ತಮ್ಮ ಅವಧಿಯಲ್ಲಿ ತೆರಿಗೆ ಪರಿಷ್ಕರಣೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ವಸತಿ ಕಟ್ಟಡಗಳಿಗೆ ಶೇ.20 ಹಾಗೂವಾಣಿಜ್ಯ ಕಟ್ಟಡಗಳಿಗೆ ಶೇ.25 ರ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹವಾಗಲಿದೆ. ಇದರಿಂದ ಬಾಡಿಗೆ ಮನೆ, ವಾಣಿಜ್ಯ ಕಟ್ಟಡ, ಪೇಯಿಂಗ್ ಗೆಸ್ಟ್ ಕಟ್ಟಡಗಳ ದರದಲ್ಲಿ
ಏರಿಕೆಯಾಗಲಿದೆ. 2006ರಲ್ಲಿ ಬಿಎಂಪಿ ಬಿಬಿಎಂಪಿಯಾಗಿ ಬದಲಾದ ಬಳಿಕ ಒಂದು ಬಾರಿಯೂ ಆಸ್ತಿ ತೆರಿಗೆ ಏರಿಕೆ ಮಾಡಿರಲಿಲ್ಲ. ಬಿಬಿಎಂಪಿ ಆದಾಯ ಹೆಚ್ಚಿಸುವ ದೃಷ್ಟಿಯಿಂದ
ಈಗ ತೆರಿಗೆ ಪರಿಷ್ಕರಣೆಗೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಕೆಎಮ್ ಸಿ) ಕಾಯ್ದೆ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆಯಾಗಬೇಕು. ಈ ಹಿಂದಿನ ಪಾಲಿಕೆ ಆಡಳಿತ ಈ ಮೂರು ವರ್ಷದ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆರ್ಥಿಕ ನಷ್ಟದಲ್ಲಿರುವ ಸಂದರ್ಭದಲ್ಲಿ ಪರಿಷ್ಕರಣೆಯ ಅವಧಿ ಮುಂದೂಡುವುದು ಸರಿಯಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಸಲಹೆ ನೀಡಿತ್ತು. ಪಾಲಿಕೆ ಆದಾಯ ವರ್ಷದಿಂದ ವರ್ಷಕ್ಕೆ ಕುಂಠಿತವಾದಾಗ 2014ರಲ್ಲೇ ತೆರಿಗೆ ಪರಿಷ್ಕರಿಸುವ ಪ್ರಸ್ತಾಪ ಬಂದಿತ್ತು. ಆಸ್ತಿಗಳನ್ನು ಅಡಮಾನವಿಟ್ಟು ಛೀಮಾರಿಗೆ ಒಳಗಾಗಿದ್ದರೂ ತೆರಿಗೆ ಪರಿಷ್ಕರಿಸುವ ಸಾಹಸಕ್ಕೆ ಪಾಲಿಕೆ ಆಡಳಿತ ಮುಂದಾಗಿರಲಿಲ್ಲ.
ಪಿಜಿ ಮತ್ತಷ್ಟು ದುಬಾರಿ: ಈ ದರ ಜಾರಿಯಾದರೆ ನಗರದ ವ್ಯಾಪ್ತಿಯಲ್ಲಿ ಪೇಯಿಂಗ್ ಗೆಸ್ಟ್ ದರ ಏರಿಕೆಯಾಗಲಿದೆ. 2014 ರ ಆಗಸ್ಟ್‍ನಲ್ಲಿ ಪಿಜಿ ಕಟ್ಟಡಗಳನ್ನು ವಾಣಿಜ್ಯ ಕಟ್ಟಡದ ವಿಭಾಗಕ್ಕೆ ಸೇರಿಸಿ ತೆರಿಗೆ ವಸೂಲಿ ಮಾಡಬೇಕು ಎಂದುಕೌನ್ಸಿಲ್‍ನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯ ಅನ್ವಯವಾದರೆ ಪಿಜಿಗಳ ದರ ಹೆಚ್ಚಲಿದೆ. ನಗರದಲ್ಲಿ ಸುಮಾರು 4,000 ಪಿಜಿ ಗಳಿವೆ ಎಂದು ಅಂದಾಜಿಸಲಾಗಿದೆ.
ಹಲವು ವಿಭಾಗ: ಆಸ್ತಿ ತೆರಿಗೆಯನ್ನು `ಎ, ಬಿ, ಸಿ, ಡಿ, ಇ,ಎಫ್ ' ಎಂದು ವಿಭಾಗಿಸಲಾಗಿದೆ. ಆರ್‍ಸಿಸಿ, ಮದ್ರಾಸ್ ಛಾವಣಿ ಕಟ್ಟಡ, ಹೆಂಚು, ಶೀಟು ಎಂದು ಮೊದಲಾಗಿ ವಿಭಾಗಿಸಲಾಗಿದೆ. ಕಟ್ಟಡದ ಚ.ಅಡಿ ಒಂದಕ್ಕೆ ತೆರಿಗೆ ನಿಗದಿ ಮಾಡಿದ್ದು, 10 ತಿಂಗಳಿಗೊಮ್ಮೆ ಪಾವತಿಸಿಸಬೇಕು. ಕಟ್ಟಡ ನಿರ್ಮಾಣ ಸ್ಥಳ, ವರ್ಷ , ಖಾಲಿ ಜಾಗ ಸೇರಿದಂತೆ ಕಟ್ಟಡದ ಮಾದರಿ ತೆರಿಗೆ ನಿಗದಿಪಡಿಸಲಾಗುತ್ತದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ(ಎಸ್‍ಎಎಸ್)ಗೂ ಬದಲಾವಣೆ ತರಲು ಚಿಂತಿಸಲಾಗಿದೆ. ಬಿಬಿಎಂಪಿ ಮಾಹಿತಿಯಿಂತೆ ಸದ್ಯಕ್ಕೆ 16 ಲಕ್ಷ ಆಸ್ತಿಗಳಿವೆ. ಇದರಲ್ಲಿ ವಸತಿ
ಹಾಗೂ ವಾಣಿಜ್ಯ ಕಟ್ಟಡ ಎಂಬುದರ ಬಗ್ಗೆ ಸಾಕಷ್ಟು ಗೊಂದಲವಿದೆ. ಆಸ್ತಿ ಮಾಲಿಕರು ತಪ್ಪು ಮಾಹಿತಿ ನೀಡುತ್ತಿದ್ದು,ಆದಾಯ ಸೋರಿಕೆಯಾಗುತ್ತಿದೆ. ಹೀಗಾಗಿ ಈ ಪದ್ಧತಿ ಬದಲಿಸುವ ಚರ್ಚೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics