ಬೆಂಗಳೂರು: ಒಂದೆಡೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರೋಧಿ ಬಣದ ತೂಕ ಹೆಚ್ಚುತ್ತಿದ್ದು, ಸಿದ್ದರಾಮಯ್ಯ ಬಣದಲ್ಲಿ ತಂತ್ರಗಾರಿಕೆ ರೂಪಿಸುತ್ತಿದ್ದವರ ಪೈಕಿ ಒಬ್ಬೊಬ್ಬರಾಗಿ ದೂರ ಸರಿಯಲಾರಂಭಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ಗೆ ಕರೆ ತರುವ ವಿಚಾರದಲ್ಲಿ ತೀರಾ ಮಹತ್ವದ ಪಾತ್ರ ವಹಿಸಿದ್ದ ವ್ಯಕ್ತಿಗಳಾದ ಎಚ್.ವಿಶ್ವನಾಥ್ ಬೆನ್ನಲ್ಲೇ ಇನ್ನೊಬ್ಬ ಮುಖಂಡ ಎಚ್.ಎಂ.ರೇವಣ್ಣ ಅವರೂ ಮುನಿಸಿಕೊಂಡಿರುವುದು ಪಕ್ಷದ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಈ ಮಧ್ಯೆ ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಒತ್ತಡ ಹೆಚ್ಚುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಅಕ್ಟೋಬರ್ 24ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಿದ್ದರಾಮಯ್ಯ ವಿರೋಧಿ ಬಣದ ಅಘೋಷಿತ ನೇತೃತ್ವ ವಹಿಸಿರುವ ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಹೈಕಮಾಂಡ್ ಜತೆ ಚರ್ಚೆ ನಡೆಸಿರುವ ಬೆನ್ನಲ್ಲೇ ಸಿದ್ದರಾಮಯ್ಯ ದೆಹಲಿಯತ್ತ ಮುಖ ಮಾಡಿದ್ದಾರೆ.
ಅಕ್ಟೋಬರ್ 24ರಂದು ಅವರು ದೆಹಲಿಗೆ ತೆರಳುವುದು ಬಹುತೇಕ ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ. ದಸರಾ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಆಂತರಿಕ ಬೇಗುದಿ ಇನ್ನಷ್ಟು ಪ್ರಬಲವಾಗಬಹುದು ಎಂಬುದಕ್ಕೆ ಇದೆಲ್ಲ ಬೆಳವಣಿಗೆಗಳು ಸಾಕ್ಷಿಯಾಗಿದ್ದು, ಕಾಂಗ್ರೆಸ್‍ನ ಹಿರಿಯ ಮುಖಂಡರ ಪ್ರಕಾರ ಇನ್ನೊಂದು ವಾರದಲ್ಲಿ ರಾಜ್ಯ ರಾಜಕಾರಣದ ದಿಕ್ಕು ಯಾವ ಕಡೆ ಸಾಗಬಹುದು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಮುನಿಸೇಕೆ ?: ಸಿದ್ದರಾಮಯ್ಯ ಅವರ ಆಪ್ತ ವರ್ಗ ಎಂದೇ ಗುರುತಿಸಲ್ಪಟ್ಟಿದ್ದ ಎಚ್.ಎಂ.ರೇವಣ್ಣ ಹಾಗೂ ಎಚ್.ವಿಶ್ವನಾಥ್ ಅವರ ಕೋಪಕ್ಕೆ ಪ್ರತ್ಯೇಕ ಕಾರಣಗಳಿವೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆ ಸಂದರ್ಭದಲ್ಲಿ ತಮಗೆ ಮಡಿಕೇರಿ ಜಿಲ್ಲೆಯಿಂದ ಟಿಕೆಟ್ ಕೊಡುವಂತೆ ವಿಶ್ವನಾಥ್ ಬೇಡಿಕೆ ಸಲ್ಲಿಸಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಸಿದ್ದರಾಮಯ್ಯ ಸಮ್ಮತಿ ನೀಡದೇ ಇರುವುದು ವಿಶ್ವನಾಥ್ ಕೋಪಕ್ಕೆ ಕಾರಣ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇದರ ಜತೆಗೆ ಐಎಎಸ್ ಅಧಿಕಾರಿಯೊಬ್ಬರ ವರ್ಗಾವಣೆ ವಿಚಾರದಲ್ಲಿ ರೇವಣ್ಣ ಅವರು ಮಾಡಿದ ಶಿಫಾರಸಿಗೆ ಸಿದ್ದರಾಮಯ್ಯ ಒಪ್ಪಿಗೆ ನೀಡದೇ ಇದ್ದ ಹಿನ್ನೆಲೆಯಲ್ಲಿ ರೇವಣ್ಣ ಕೋಪಿಸಿಕೊಂಡು ಅಕ್ಟೋಬರ್ 12ರಂದೇ ದುಬೈ ಪ್ರವಾಸಕ್ಕೆ ತೆರಳಿದ್ದು, ಶುಕ್ರವಾರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಶಾಸಕರಿಗೆ ಕ್ಲಾಸ್: ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಅವರ ಹಿತಾಸಕ್ತಿ ಕಾಪಾಡುವುದಕ್ಕೆ ಇಷ್ಟು ದಿನ ಬೆಂಬಲ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧ ಇನ್ನಿಲ್ಲದಷ್ಟು ಹಳಸಿದೆ. ಆದರೆ ಇವರಿಬ್ಬರನ್ನು ಮತ್ತೆ ಒಗ್ಗೂಡಿಸಲು ಇಬ್ಬರು ಶಾಸಕರು ಗುಪ್ತವಾಗಿ ನಡೆಸಿದ ಸಂಧಾನವೂ ಈಗ ಮುರಿದು ಬಿದ್ದಿದೆ.
ಬೆಂಗಳೂರು ನಗರದವರೇ ಆದ ಈ ಇಬ್ಬರು ಶಾಸಕರು, ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸಿದ್ದರಾಮಯ್ಯ ಅವರ ಪರವಾಗಿ ಹರಿಪ್ರಸಾದ್ ಬಳಿ ತೆರಳಿದ್ದ ಇವರಿಬ್ಬರು ಪರಸ್ಪರ ಮುನಿಸು ಬಿಡುವಂತೆ ಮನವಿ ಮಾಡಿದ್ದರು. ಇದರಿಂದ ತೀವ್ರ ಕೋಪಗೊಂಡ ಹರಿಪ್ರಸಾದ್ `ನೀವಿಬ್ಬರು ಸಿಎಂ ಸಿದ್ದರಾಮಯ್ಯ ಅವರನ್ನು ಈಗ ನೋಡುತ್ತಿದ್ದೀರಿ. ನೀವು ಅವರ ಫಲಾನುಭವಿಗಳಾ? ಅವರ ಸುತ್ತ ಅಧಿಕಾರ ಅನುಭವಿಸುತ್ತಾ ಇರುವವರು ಸುಮ್ಮನಿದ್ದಾರೆ. ಸಂಧಾನ ನಡೆಸುವುದಕ್ಕೆ ಅವರು ಬರಲಿ. ನಿಮಗ್ಯಾಕೆ ಈ ಉಸಾಬರಿ ? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics