ರಾಮನಗರ: ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಿಗೆ ಕೂಡ ಅವರದ್ದೇ ಆದ ಜವಾಬ್ದಾರಿಗಳು, ಕೆಲಸಗಳು ಇರುತ್ತವೆ. ಆಡಳಿತ ಪಕ್ಷ ಉತ್ತಮವಾಗಿ ಆಡಳಿತ ನಡೆಸುವಂತೆ ವಾತಾವರಣ ಕಲ್ಪಿಸುವುದು, ಆಳುವ ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸುವುದು, ಸಹಕಾರ ನೀಡುವುದು ಇವೆಲ್ಲ ವಿಪಕ್ಷ ನಾಯಕರ ಕೆಲಸಗಳು. ವಿಪಕ್ಷ ನಾಯಕರೂ ಸಹ ಮಾತನಾಡುವಾಗ, ಹೇಳಿಕೆ ಕೊಡುವಾಗ ಜವಾಬ್ದಾರಿ ತೋರಿಸಬೇಕಾಗುತ್ತದೆ. ಇಲ್ಲದಿದ್ದರೆ ಎಡವಟ್ಟಾಗುತ್ತದೆ ಎಂಬುದಕ್ಕೆ ಶನಿವಾರ ಬಿಜೆಪಿಯ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರು ನೀಡಿದ ಹೇಳಿಕೆಯೇ ಸಾಕ್ಷಿ.
ರಾಮನಗರ ಜಿಲ್ಲೆಯ ಮಲ್ಲಾಪುರ ಗ್ರಾಮದಲ್ಲಿ ನಿನ್ನೆ ಹತ್ಯೆಯಾದ ಎಸ್‌ಐ ಜಗದೀಶ್ ಅವರ ಅಂತಿಮ ದರ್ಶನಕ್ಕೆ ಈಶ್ವರಪ್ಪ ಆಗಮಿಸಿದ್ದರು. ಆಗ ಪತ್ರಕರ್ತೆಯೊಬ್ಬರು ರಾಜ್ಯದಲ್ಲಿ ದಕ್ಷ ಅಧಿಕಾರಿಗಳ ಹತ್ಯೆ, ದರೋಡೆ, ಅತ್ಯಚಾರದಂತಹ ಪ್ರಕರಣಗಳು ಹೆಚ್ಚುತ್ತಿವೆ. ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷವಾದ ನೀವು ಸರ್ಕಾರವನ್ನು ಎಚ್ಚರಿಸುವ ಕೆಲಸ ಏನು ಮಾಡುತ್ತಿದ್ದೀರಿ ಎಂದು ಕೇಳಿದಾಗ, 'ಅಲ್ಲಮ್ಮ..ನೀನೊಬ್ಬಳು ಹೆಣ್ಣು ಮಗಳು, ಇಲ್ಲಿದ್ದೀಯಾ, ನಿನ್ನನ್ನ ಯಾವನೊ ಎಳ್ಕೊಂಡು ಹೋಗಿ ರೇಪ್ ಮಾಡಿದ್ರೆ ನಾವು ವಿರೋಧ ಪಕ್ಷದವ್ರು ಎಲ್ಲೋ ಇರ್ತಿವಿ ಏನು ಮಾಡಕ್ಕಾಗತ್ತೆ...' ಎಂದು ಬೇಜವಾಬ್ದಾರಿ ಉತ್ತರ ಕೊಟ್ಟಿದ್ದಾರೆ. ಈಶ್ವರಪ್ಪ ಅವರು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.