ಬೆಂಗಳೂರು: ಶವದ ಮೇಲೆ ಸಿಕ್ಕ ಲಾಕೆಟ್ ನೀಡಿದ ಸುಳಿವು ಆಧರಿಸಿ ಗರ್ಭಿಣಿಯ ಕೊಲೆ ಪ್ರಕರಣವನ್ನು ವರ್ತೂರು ಪೊಲೀಸರು ಭೇದಿಸಿದ್ದಾರೆ.
ಒಡಿಶಾ ಮೂಲದ ಗಾಯತ್ರಿ ಸ್ವೇನ್(23) ಕೊಲೆಯಾಗಿದ್ದ ಯುವತಿ. ಈಕೆ ಪ್ರಿಯಕರ ಮನೋರಂಜನ್‍ದಾಸ್ (25) ಬಂಧಿತ. ಸೆ.4ರಂದು ವರ್ತೂರು ಸಮೀಪದ ನೀಲಗಿರಿ ತೋಪಿನಲ್ಲಿ ದುಪ್ಪಟ್ಟದಿಂದ ಗಾಯತ್ರಿ ಕತ್ತು ಬಿಗಿದು ಹತ್ಯೆ ಮಾಡಿದ್ದ. ಗಾಯತ್ರಿ, ಮನೋರಂಜನ್ ಒಂದೇ ಊರಿನವರಾಗಿದ್ದು 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿವಾಹಕ್ಕೆ ಪಾಲಕರು ಒಪ್ಪದ ಕಾರಣ ಬೆಂಗಳೂರಿಗೆ ಬಂದಿದ್ದರು. ವರ್ತೂರು ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಜೋಡಿ ವಾಸವಾಗಿದ್ದರು.
ಮಗಳು ನಾಪತ್ತೆಯಾಗಿದ್ದ ಬಗ್ಗೆ ಪಾಲಕರು ಒಡಿಶಾದಲ್ಲಿ ದೂರಿದ್ದರು. ಈ ಹಿನ್ನೆಲೆಯಲ್ಲಿ ಗಾಯತ್ರಿಯನ್ನು ಊರಿಗೆ ಕರೆದೊಯ್ಯಲು ಮನೋರಂಜನ್ ನಿರ್ಧರಿಸಿದ್ದ. ಆದರೆ, ಗಾಯತ್ರಿ 3 ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಪಾತ ಮಾಡಿಸಲು ಮನೋರಂಜನ್ ತಿಳಿಸಿದ್ದ. ಅದಕ್ಕೆ ಗಾಯತ್ರಿ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ನೀಲಗಿರಿ ತೋಪಿಗೆ ಕರೆದೊಯ್ದು ಆಕೆಯನ್ನು ಹತ್ಯೆ ಮಾಡಿದ್ದ. ಶವದ ಮೇಲೆ ಸಿಕ್ಕ ಲಾಕೆಟ್ ನಲ್ಲಿ ಮನೋರಂಜನ್ ನ ಫೋಟೋ ಇತ್ತು. ಇದರ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.