ಬೆಂಗಳೂರು: ದಸರಾ ಹಬ್ಬದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರು ನಗರ ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಟರ್ಮಿನಲ್ ಗಳಲ್ಲಿ ಜನ ಹಾಗೂ ವಾಹನ ದಟ್ಟಣೆ
ಹೆಚ್ಚಾಗಲಿದೆ. ಇದರಿಂದ ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಬಸ್ ಟರ್ಮಿನಲ್‍ಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ.
ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸರು ಕೆಲವು ಮಾರ್ಗೋಪಾಯಗಳನ್ನು ರೂಪಿಸಿದ್ದಾರೆ. ಧನ್ವಂತ್ರಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಫ್ಲಾಟ್ ಫಾರಂ ರಸ್ತೆ ಮತ್ತು ಖೋಡೇಸ್ ಜಂಕ್ಷನ್‍ಗಳಲ್ಲಿ ಬುಧವಾರದ ಮಟ್ಟಿಗೆ ಖಾಸಗಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ. ಮೈಸೂರು, ಕೊಡಗು ಮತ್ತು ಕೇರಳ ಕಡೆಗೆ ಸಂಚರಿಸುವ ಬಸ್‍ಗಳು ಮೈಸೂರು ರಸ್ತೆಯಲ್ಲಿರುವ ಬಸ್ ನಿಲ್ದಾಣದಿಂದ ಸಂಚರಿಸಲಿವೆ. ತಮಿಳು ನಾಡು ಕಡೆಗೆ ಸಂಚರಿಸುವ ಬಸ್‍ಗಳು ಶಾಂತಿ ನಗರ ಬಸ್ ನಿಲ್ದಾಣದಿಂದ ಸಂಚರಿಸಲಿವೆ. ದಾವಣಗೆರೆಗೆ ಸಂಚರಿಸುವ ಬಸ್‍ಗಳು ಚಿಕ್ಕ ಲಾಲ್‍ಬಾಗ್ ಬಸ್ ನಿಲ್ದಾಣದಿಂದ ಹೊರಡಲಿವೆ.
ದೂರದ ಪ್ರಯಾಣದ ಸಾರಿಗೆ ಬಸ್‍ಗಳಿಗೆ ಬಾಳೆಕಾಯಿ ಮಂಡಿ, ಜಕ್ಕರಾಯನ ಕೆರೆ, ಎನ್‍ಜಿಇಎಫ್ ಟರ್ಮಿನಲ್, ನ್ಯೂ ಪೀಣ್ಯ ಬಸ್ ಟರ್ಮಿನಲ್ ಪ್ರವೇಶ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಬೆಂಗಳೂರಿನ ಹೊರಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಬಿಎಂಟಿಸಿ ಹಾಗೂ ಆಟೋ ರಿಕ್ಷಾಗಳ ಮೂಲಕ ರೈಲ್ವೆ ನಿಲ್ದಾಣ ಅಥವಾ ಕೆಎಸ್‍ಆರ್‍ಟಿಸಿ ಬಸ್ ಟರ್ಮಿನಲ್ ತಲುಪಬೇಕು. ಇನ್ನು ಮೈಸೂರಿನತ್ತ ಪ್ರಯಾಣಿಸುವವರು ಕಡ್ಡಾಯವಾಗಿ ಮೈಸೂರು ರಸ್ತೆಯಲ್ಲಿರುವ ಬಸ್ ಟರ್ಮಿನಲ್ ಮೂಲಕವೇ ತೆರಳಬೇಕು.
ತಮಿಳುನಾಡಿನತ್ತ (ಚೆನ್ನೈ, ತಿರುಚಿ, ಕರೈಕುಡಿ, ಪುದುಕೋಟೈ, ತಂಜಾವೂರು, ಕೊಯಿಮತ್ತೂರು, ಮಧುರೈ ಮತ್ತು ಕುಂಬಕೋಣಂ) ಪ್ರಯಾಣಿಸುವವರು ಶಾಂತಿನಗರ ಬಸ್ ನಿಲ್ದಾಣದಲ್ಲಿ ಕೆಎಸ್‍ಆರ್ ಟಿಸಿ ಮತ್ತು ಎಸ್‍ಇಟಿಸಿ ಪ್ರೀಮಿಯರ್ ಬಸ್‍ಗಳ ಮೂಲಕ ತೆರಳಬೇಕು. ಇನ್ನೂ ಶಿವಮೊಗ್ಗದತ್ತ ಪ್ರಯಾಣಿಸುವವರು ಯಶವಂತಪುರದ ಟಿಟಿಎಂಸಿಯಿಂದ ಹೋಗಬೇಕು. ಬೆಂಗಳೂರು ನಗರದಿಂದ ಹೊರಗೆ ಹೋಗದವರು ಸಂಜೆ 4ರಿಂದ 11ರವರೆಗೆ ಕೆ.ಜಿ.,ರಸ್ತೆ, ಗೂಡ್ಸ್‍ಶೆಡ್ ರಸ್ತೆ, ಶೇಷಾದ್ರಿ ರಸ್ತೆ, ಸುಬೇದಾರ್ ಚಟ್ಟರಾಂ ರಸ್ತೆ, ಪ್ಲಾಟ್ ಫಾರಂ ರಸ್ತೆ, ಕೃಷ್ಣ ಪ್ರೊಲೀರ್ ಮಿಲ್ ರಸ್ತೆಗಳನ್ನು ಬಳಸದೇ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.