ಬೆಂಗಳೂರು: ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾರ್ಥಿ ಸಂಘಟನೆ ಹೋರಾಟ ನಡುವೆಯೇ ಸೀತಾರಾಂ ಜಿಂದಾಲ್ ಸ್ಕೂಲ್ ಆಫ್ ಎಕೆನಾಮಿಕ್ಸ್ ಬಗೆಗಿನ ಗೊಂದಲದ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಬೆಂಗಳೂರು ವಿಶ್ವವಿದ್ಯಾನಿಲಯ, ಕೆಲವು ಮಾರ್ಪಾಡುಗಳೊಂದಿಗೆ ನೂತನ ಸಂಸ್ಥೆಗೆ ಸಿಂಡಿಕೇಟ್ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆದುಕೊಂಡಿತು.
ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ರೂ 100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುವ ಸೀತಾರಾಂ ಸ್ಕೂಲ್ ಆಫ್ ಎಕೆನಾಮಿಕ್ಸ್ ಸ್ಥಾಪನೆಗೆ ಸಂಬಂಧಿಸಿದ ಗೊಂದಲ ನಿರ್ವಾರಣೆಗಾಗಿಯೇ ಕುಲಪತಿ ಪ್ರೊ.ತಿಮ್ಮೇಗೌಡ ಅವರು ವಿಶೇಷ ಸಿಂಡಿಕೇಟ್ ಸಭೆ ಕರೆದಿದ್ದರು.
ಇದೇ ವೇಳೆ ಸೀತಾರಾಂ ಜಿಂದಾಲ್ ಸ್ಕೂಲ್ ಆಫ್ ಎಕೆನಾಮಿಕ್ಸ್ ಸತ್ಹಾಪನೆಗೆ ವಿವಿ ಕ್ಯಾಂಪಸ್ ನಲ್ಲಿ ಜಾಗ ಕೊಡಬಾರದೆಂದು ಎಸ್ಎಫ್ಐ ಸಂಘಟನೆ ಸದಸ್ಯರು ಸಿಂಡಿಕೇಟ್ ಸಭೆ ನಡೆಯುತ್ತಿದ್ದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ ವಿವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಹಿತಾಸಕ್ತಿ ಹೊಂದಿರುವ ಕಂಪನಿಗಳಿಗೆ ಬೆಂವಿವಿ ರತ್ನಗಂಬಳಿ ಹಾಸುತ್ತಿದೆ. ಉಳ್ಳವರಿಗೆ ಮಾತ್ರ ಶಿಕ್ಷಣ ಎನ್ನುವ ರೀತಿಯಲ್ಲಿ ವಿವಿ ನಡೆದುಕೊಳ್ಳುತ್ತಿದೆ. ಅರ್ಥಶಾಸ್ತ್ರ ವಿಭಾಗವನ್ನು ಈ ಜಿಂದಾಲ್ ಸ್ಕೂಲ್ ನಲ್ಲಿ ವಿಲೀನಗೊಳಿಸುವ ಮೂಲಕ ಆ ವಿಭಾಗವನ್ನು ಮುಚ್ಚಿಹಾಕುತ್ತಿದೆ. ಹಾಗಾಗಿ ಈ ಯೋಜನೆ ಕೈ ಬಿಡಬೇಕೆಂದು ಎಸ್ಎಫ್ಐ ರಾಜ್ಯ ಕಾರದರ್ಶಿ ಗುರುರಾಜ ದೇಸಾಯಿ ಒತ್ತಾಯಿಸಿದರು. ಈ ವೇಳೆ ಸಿಂಡಿಕೇಟ್ ಸಭೆ ನಡೆಯುತ್ತಿದ್ದ ಕೊಠಡಿಯ ಬಾಗಿಲನ್ನು ಬಡಿದ ವಿದ್ಯಾರ್ಥಿಗಳು ಸಭೆಗೆ ಅಡ್ಡಿಪಡಿಸಲು ಯತ್ನಿಸಿದರು.
ಸಿಂಡಿಕೇಟ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಲಪತಿ ಪ್ರೊ. ತಿಮ್ಮೇಗೌಡ ಸೀತಾರಾಂ ಜಿಂದಾಲ್ ಸ್ಕೂಲ್ ಆಫ್ ಎಕೆನಾಮಿಕ್ಸ್ ಸ್ಥಾಪನೆ ಕುರಿತಂತೆ ಕೆಲ ಸಿಂಡಿಕೇಟ್ ಸದಸ್ಯರಲ್ಲಿ ಗೊಂದಲ ಇದ್ದಿದ್ದು ನಿಜ. ಇದೀಗ ಅವರ ಗೊಂದಲಗಳನ್ನು ನಿವಾರಣೆ ಮಾಡಲಾಗಿದೆ ಎಂದರು.