ಬೆಂಗಳೂರು: ಸೆಕೆ ಎಂದು ರಾತ್ರಿ ಕೊಠಡಿಯ ಕಿಟಕಿ ತೆಗೆದು ಆ ಮಹಿಳೆ ಮಲಗಿದ್ದರು. ಇದನ್ನು ಗಮನಿಸಿದ ಕಳ್ಳರು ಕೈಚಳಕ ತೋರಿದ್ದಾರೆ. ಕಿಟಕಿಯಿಂದ ಕೈ ತೂರಿಸಿದ ದುಷ್ಕರ್ಮಿ 30 ಗ್ರಾಂ ಸರ ದೋಚಿರುವ ಘಟನೆ ಸುಬ್ರಹ್ಮಣ್ಯ ಪುರದಲ್ಲಿ ನಡೆದಿದೆ.
ಕೋಣನಕುಂಟೆ ಬ್ಯಾಂಕ್ ಆಫ್ ಬರೋಡಾ ಕಾಲೊನಿ ನಿವಾಸಿ ರಂಜಿತಾ ಎಂಬುವರು, ಸೆಕೆ ಎಂದು ಕಿಟಕಿ ತೆರೆದುಕೊಂಡು ಅದರ ಪಕ್ಕದಲ್ಲೇ ಮಲಗಿದ್ದರು. ಈ ವೇಳೆ ದುಷ್ಕರ್ಮಿ ಕೈ ಹಾಕಿ ಸರ ಕಿತ್ತುಕೊಂಡಿದ್ದಾನೆ. ಎಚ್ಚರಗೊಂಡ ರಂಜಿತಾ ಸರ ಇಲ್ಲದಿರುವುದನ್ನು ನೋಡಿಕೊಂಡು ಕೂಗುವಷ್ಟರಲ್ಲಿ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದ. ಸುಬ್ರಹ್ಮಣ್ಯಪುರ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆ ಸರ ಅಪಹರಣ: ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆ ಮುಂದೆ ನಿಂತಿದ್ದ ಮಹಿಳೆ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹುಳಿಮಾವು ಅಕ್ಷಯ ನಗರದಲ್ಲಿ ನಡೆದಿದೆ.
ಅಕ್ಷಯ ನಗರ ನಿವಾಸಿ ಸುಜಿ ಅಲೆಕ್ಸ್ ಸರ ಕಳೆದುಕೊಂಡವರು. ಶುಕ್ರವಾರ ಬೆಳಗ್ಗೆ 9.30ರ ಸಮಯದಲ್ಲಿ ಸುಜಿ ಅಲೆಕ್ಸ್ ಮನೆ ಮುಂದೆ ನಿಂತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಕತ್ತಿನಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಈ ವೇಳೆ ಆಕೆ ಕೂಗಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.