ಬೆಂಗಳೂರು: ಹರಪ್ಪ ಲಿಪಿಯನ್ನು ಯಾರೂ ಇದುವರೆಗೂ ಸಮರ್ಥವಾಗಿ ಅಧ್ಯಯನ ಮಾಡಿಲ್ಲ ಹಾಗೂ ಅದಕ್ಕೆ ಯಾವುದೇ ಸೂಕ್ತ ದಾಖಲೆ ಇಲ್ಲ. ಹಾಗಾಗಿ ಅದನ್ನು ಇತಿಹಾಸ ಎಂದು ಒಪ್ಪಿಕೊಳ್ಳಲು ಕಷ್ಟ ಎಂದು ಇತಿಹಾಸ ತಜ್ಞ ಗೋಪಾಲ್ ರಾವ್ ಅಭಿಪ್ರಾಯಪಟ್ಟರು.
ಇಂಡಸ್ ಪಬ್ಲಿಷಿಂಗ್ ಗ್ರೂಪ್ ನಗರದ ವಾಡಿಯಾ ಸಭಾಗಣಾದಲ್ಲಿ ಏರ್ಪಡಿಸಿದ್ದ ಡಾ.ಶಂಕರ್ ಎನ್.ಕಶ್ಯಪ್ ಅವ್ವರ ದಶರಾಜ್ಞ ದಿ ಬ್ಯಾಟ್ಲ್ ಆಫ್ ಟೆನ್ ಕಿಂಗ್ಸ್ ಮತ್ತು ಸಿ ಅರುಣಾ ಅವರು ಕನ್ನಡಕ್ಕೆ ಅನುವಾದಿಸಿರುವ ಕಲ್ಪತರು ಸೋಮ ಕೃತಿಗಳ ಬಿಡುಗಡೆ ಮಾಡಿದ ಅವರು ಹರಪ್ಪ ಲಿಪಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಈಗಲೂ ಸಾಗಿದೆ. ಆ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಅದಕ್ಕೆ ಸೂಕ್ತ ದಾಖಲೆಗಳಿಲ್ಲ. ಅಶೋಕನ ಬರಹವನ್ನು ನಿರ್ದಿಷ್ಟವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ನಡೆದಿದೆ. ಆದರೆ ವೇದಗಳಿಗೆ ದಾಖಲೆಯಿದೆ. ಇತಿಹಾಸಕಾರರು ಹರಪ್ಪ ಸಂಸ್ಕೃತಿಯನ್ನು ಇತಿಹಾಸ ಎಂದು ಒಪ್ಪಿಕೊಂಡರೆ ವೇದಕಾಲವನ್ನೇಕೆ ಇತಿಹಾಸ ಎಂದು ಪರಿಗಣಿಸಬಾರದು ಎಂದು ಪ್ರಶ್ನಿಸಿದರು.
ನಿರ್ದೇಶಕ ಪಿ ಶೇಷಾದ್ರಿ, ಹರಪ್ಪ ಸಂಸ್ಕೃತಿ ಗತಿಸಿದ ನಂತರ ನಡೆದದ್ದು ರಾಮಾಯಣ, ಹರಪ್ಪ ಸಂಸ್ಕೃತಿಯನ್ನು ಇತಿಹಾಸ ಎಂದು ಒಪ್ಪುವುದಾದರೆ ರಾಮಾಯಣವನ್ನು ಇತಿಹಾಸ ಎಂದು ಒಪ್ಪಿಕೊಳ್ಳಲಿ. ಹರಪ್ಪ ಕಾಲದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಸಮಾಜದಲ್ಲಿ ಯಾವುದೇ ರೀತಿಯ ಅಸಹಿಷ್ಣುತೆ ಇರಲಿಲ್ಲ. ಆದರೆ ಇಂದು ನಮ್ಮ ಸಮಾಜದಲ್ಲಿ ಉಂತಾಗುತ್ತಿರುವ ಅಸಹಿಷ್ಣುತೆಗೆ ಜಾತಿ ವ್ಯವಸ್ಥೆ ಮುಖ್ಯ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಸಮಾಜದಲ್ಲಿ ಉಂಟಾಗುತ್ತಿರುವ ಗೊಂದಲಗಳು ಅಸಹಿಷ್ಣುತೆ, ಪ್ರತಿದಿನ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವುದು ಎಲ್ಲವೂ ಸಹ ನಾವು ಇಂದಿನ ಸಮಾಜದಲ್ಲಿ ನಿರ್ಮಿಸಿಕೊಂಡಿರುವ ಜಾತಿ ವ್ಯವಸ್ಥೆಯಿಂದ ಎನ್ನಬಹುದು ಆದರೆ ಸಾವಿರಾರು ವರ್ಷಗಳ ಹಿಂದಿನ ಹರಪ್ಪ ನಾಗರಿಕತೆಯಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ. ನಮಗೇಕೆ ಜಾತಿ ವ್ಯವಸ್ಥೆ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.