ಬೆಳಗಾವಿ: ರಾಜ್ಯ ಸರ್ಕಾರವು ಬೆಳಗಾವಿಯಲ್ಲಿಯೇ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸಬೇಕೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.
ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿ ವರ್ಷ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸಿಕೊಂಡು ಬರಲಾಗುತ್ತಿದೆ.ಈಗ ಕಾಂಗ್ರೆಸ್ ಸರ್ಕಾರವು ಆ ಪರಂಪರೆಯನ್ನು ಮುರಿಯುವ ಪ್ರಯತ್ನ ಮಾಡುತ್ತಿದೆ. ಇದು ಸರಿಯಲ್ಲ. ಪ್ರತಿ ವರ್ಷವು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೇ ಸರ್ಕಾರ ಚಳಿಗಾಲ ಅಧಿವೇಶ ನಡೆಸಬೇಕು. ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಮಹದಾಯಿ, ಕಳಸಾ- ಬಂಡೂರಿ ಅನುಷ್ಠಾನಕ್ಕೆ ಬಿಜೆಪಿ ಮೊದಲಿನಿಂದಲೂ ಪ್ರಯತ್ನಿಸಿದೆ. ಯಡಿಯೂರಪ್ಪ ಅವರು ಸಿಎಂ ಆದ್ದಾಗ ಈ ಯೋಜನೆಗೆ 100 ಕೋಟಿ ರೂಪಾಯಿ ಅನುದಾನ ಒದಗಿಸಿದ್ದರು.ಕಾಲುವೆ ನಿರ್ಮಾಣ ನಮ್ಮ ಅವಧಿಯಲ್ಲಿ ನಡೆದಿದೆ. ಈ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡಿಲ್ಲ. ಈ ಪ್ರಕರಣ ನ್ಯಾಯಾಧೀಕರಣದ ಮುಂದಿದೆ. ನ್ಯಾಯಾಧೀಕರಣದ ಮುಂದೆ ಈ ಪ್ರಕರಣ ಹೋಗಲು ಗೋವಾದ ಅಂದಿನ ಕಾಂಗ್ರೆಸ್ ಸರ್ಕಾರ ಕಾರಣ. ನಾವು ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮಧ್ಯಂತರ ಅರ್ಜಿ ಸಲ್ಲಿಸಲು ಒತ್ತಾಯಿಸುತ್ತೇವೆ ಎಂದರು.
ರೈತರು ವಸ್ತುಸ್ಥಿತಿ ಅರ್ಥ ಮಾಡಿಕೊಂಡು, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕೇ ಹೊರತು ಬಿಜೆಪಿ ವಿರುದ್ಧವಲ್ಲ. ನಾವು ಗೋವಾದ ಬಿಜೆಪಿ ಸಿಎಂ ಅವರೊಂದಿಗೆ ಮಾತನಾಡುತ್ತೇವೆ. ಕಾಂಗ್ರೆಸ್‍ನವರು ಗೋವಾದ ವಿರೋಧ ಪಕ್ಷದ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸುವ ಕೆಲಸಕ್ಕೆ ಮುಂದಾಗಲಿ ಎಂದು ಶೆಟ್ಟರ್ ಸಲಹೆ ಮಾಡಿದರು. ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲ ಕೋಮುಗಲಭೆ ಹೆಚ್ಚಾಗಿದೆ. ಹಿಂದೂ-ಮುಸ್ಲಿಂ ಸೇರಿದಂತೆ ಇತರ ವರ್ಗಗಳ ಮಧ್ಯೆ ಸಂಘರ್ಷ ಪ್ರಾರಂಭವಾಗುತ್ತದೆ.ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಗೃಹ ಇಲಾಖೆಯ ವೈಫಲ್ಯದಿಂದಾಗಿ ಈ ಗಲಭೆಗಳು ಸಂಭವಿಸುತ್ತಿವೆ ಎಂದು ಶೆಟ್ಟರ್ ಕಿಡಿಕಾರಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗಬೇಕು ಎಂಬುದು ಪಕ್ಷದ ಆಂತರಿಕ ವಿಚಾರವಾಗಿದೆ. ಹೀಗಾಗಿ ಬಿಎಸ್‍ವೈ ಹೇಳಿಕೆಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ. ಹಾಗೆಯೇ ಅಖಿಲ ಭಾರತೀಯ ಹಿಂದೂ ಮಹಾಸಭಾವು ನ.15ರಂದು ದೇಶಾದ್ಯಂತ ನಾಥೂರಾಮ್ ಗೋಡ್ಸೆ ಪುಣ್ಯತಿಥಿ ಆಚರಿಸುತ್ತಿರುವುದಕ್ಕೂ ಬಿಜೆಪಿಗೂ ಸಂಬಂಧವಿಲ್ಲ.
● ಜಗದೀಶ ಶೆಟ್ಟರ್ ವಿಧಾನಸಭೆ ಪ್ರತಿಪಕ್ಷ ನಾಯಕ
ಸಾಲಮನ್ನಾ ಘೋಷಿಸಲಿ
ಸಮಾರಂವೊಂದರಲ್ಲಿ ಮಾತನಾಡಿದ ಶೆಟ್ಟರ್, ರೈತರ ಆತ್ಮಹತ್ಯೆ ತಡೆಯುವುದಕ್ಕಾಗಿ ರಾಜ್ಯದಲ್ಲಿ ಸಂಪೂರ್ಣ ರೈತರ ಸಾಲಮನ್ನಾ ಘೋಷಿಸಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ಸಾಲದಿಂದ ತತ್ತರಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರಾಜ್ಯ ಸರ್ಕಾರದ 2003ರ ಮಾರ್ಗಸೂಚಿಯಿಂದ ಆತ್ಮಹತ್ಯೆ ಮಾಡಿಕೊಂಡ ಎಲ್ಲ ರೈತರಿಗೂ ಸರ್ಕಾರದ ಪರಿಹಾರ ಸಿಗುತ್ತಿಲ್ಲ. ನಮ್ಮ ರಾಜ್ಯದಲ್ಲಿ 600ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಈವರೆಗೂ ಸರ್ಕಾರದಿಂದ 120 ಜನ ರೈತ ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ. ಈ ಸರ್ಕಾರದ ಮಾರ್ಗ ಸೂಚಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತನ ಹೆಸರಿನಲ್ಲಿ ಜಮೀನು ಇರಬೇಕು ಎಂಬ ನಿಯಮವೇ ತೊಡಕಾಗಿದೆ. ಈ ನಿಯಮವನ್ನು ಸರ್ಕಾರ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು.