ಆಸೀಸ್ ವಿದ್ಯಾರ್ಥಿ ಆಡಿದ್ದೆಲ್ಲಾ ಸುಳ್ಳು
ಪೊಲೀಸರು ನನ್ನಿಂದ ಬಲವಂತವಾಗಿ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡರು. ಅಲ್ಲದೇ, ನನ್ನೊಂದಿಗೆ...
ಬೆಂಗಳೂರು: ಪೊಲೀಸರು ನನ್ನಿಂದ ಬಲವಂತವಾಗಿ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡರು. ಅಲ್ಲದೇ, ನನ್ನೊಂದಿಗೆ ದುರ್ವರ್ತನೆ ತೋರಿದರು.ಸ್ಥಳೀಯರೂ ನನ್ನೊಂದಿಗೆ ಅತಿರೇಖವಾಗಿ ವರ್ತಿಸಿದರು,'' ಇದು ಮೊಣಕಾಲಿನ ಕೆಳಗೆ ಯಲ್ಲಮ್ಮ ದೇವಿ ಟ್ಯಾಟೂ ಹಾಕಿಸಿಕೊಂಡಿದ್ದ ಆಸ್ಟ್ರೇಲಿಯಾ ವಿದ್ಯಾರ್ಥಿ ಮ್ಯಾಥ್ಯೂನ ಆರೋಪವಾಗಿತ್ತು.ಆದರೆ, ಆತನ ಈ ಆರೋಪ ಸುಳ್ಳು ಬಯಲಾಗಿದೆ.ಈ ಸಂಬಂಧ ತನಿಖಾ ಅಧಿಕಾರಿಗಳು ಸಿಸಿಟಿವಿ, ದೂರುದಾರ ರಮೇಶ್ ಹಾಗೂ ಅವರ ಬೆಂಬಲಿಗರನ್ನು ವಿಚಾರಣೆ ನಡೆಸಿದಾಗ ಪೊಲೀಸರು ಕೆಟ್ಟದ್ದಾಗಿ ನಡೆದುಕೊಂಡಿಲ್ಲ ಎಂಬುದು ದೃಢಪಟ್ಟಿದೆ.
ಟ್ಯಾಟು ವಿವಾದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಸ್ಟ್ರೇಲಿಯಾ ರಾಯಭಾರ ಕಚೇರಿಯೂ
ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಪೊಲೀಸ್ ಇಲಾಖೆ ಇಲಾಖಾ ಮಟ್ಟದ ತನಿಖಾ ತಂಡ ರಚಿಸಿತ್ತು. ಈ ತಂಡ ಅಶೋಕನಗರ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ. ವಿದ್ಯಾರ್ಥಿ ಆರೋಪದ ಹಿನ್ನೆಲೆಯಲ್ಲಿ ಶೇಷಾದ್ರಿಪುರದ ಎಸಿಪಿ ಪ್ರಭಾಕರ ಬಾಕ್ರಿ ತನಿಖೆ ನಡೆಸಿ ಕೇಂದ್ರ ವಿಭಾಗದ ಡಿಸಿಪಿ ಅವರಿಗೆ ಶನಿವಾರ 13 ಪುಟಗಳ ವರದಿ ಸಲ್ಲಿಸಿದ್ದು ಪೊಲೀಸರ ಲೋಪವಿಲ್ಲ ಎಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ.
``ಆಸ್ಟೇಲಿಯಾ ವಿದ್ಯಾರ್ಥಿ ಜತೆ ಪೊಲೀಸರು ಸೌಜನ್ಯಯುತವಾಗಿಯೇ ವರ್ತಿಸಿದ್ದರು.ಹೀಗಾಗಿ ಸಿಬ್ಬಂದಿ ಮೇಲೆ ವಿದ್ಯಾರ್ಥಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ.ಇದಕ್ಕೆ ಪೂರಕವಾದ ಸಾಕ್ಷ್ಯಗಳು ತನಿಖಾ ತಂಡಕ್ಕೆ ಲಭ್ಯವಾಗಿವೆ,''ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಅ.17ರಂದು ರೆಸಿಡೆನ್ಸಿ ರಸ್ತೆಯ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಮ್ಯಾಥ್ಯೂ ಗೋರ್ಡಾನ್ ಮೊಣಕಾಲಿನ ಕೆಳಗೆ ಯಲ್ಲಮ್ಮ ದೇವಿ ಟ್ಯಾಟು ಇರುವುದನ್ನು ಶಾಂತಿನಗರ ಕ್ಷೇತ್ರದ ಬಿಜೆಪಿ ಮುಖಂಡ ರಮೇಶ್ ಯಾದವ್ ಪತ್ತೆ ಹಚ್ಚಿದ್ದರು. ಅಲ್ಲದೆ,ಯಲ್ಲಮ್ಮ ದೇವಿಯ ಹಚ್ಚೆ
ಇರುವುದನ್ನು ಯಾರಾದರು ಗಮನಿಸಿದರೆ ಖಂಡಿತ ಜಗಳವಾಗುತ್ತದೆ. ಆದ್ದರಿಂದ ಅದನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ದೇವರ ಚಿತ್ರ ಕಾಲಿನ ಮೇಲೆ ಹಾಕಿಸಿಕೊಳ್ಳುವುದು ದೇವರಿಗೆ ಅವಮಾನ ಮಾಡಿದಂತೆ,'' ಎಂದು ಹೇಳಿದ್ದರು. ಈ ವೇಳೆ ಲಘು ಮಾತಿನ ಚಕಮಕಿ ನಡೆದಿತ್ತು.ಅದೇ ವೇಳೆ ಅಶೋಕ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ವಿಷಯ ತಿಳಿದು ಎಲ್ಲರನ್ನು ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ದೇವರ ಚಿತ್ರ ಎಂಬುದು ನನಗೆ ಗೊತ್ತಿರಲಿಲ್ಲ ಎಂದ ಮ್ಯಾಥ್ಯೂ, ಕ್ಷಮೆ ಕೋರಿದ್ದ. ಅಲ್ಲದೇ ಕ್ಷಮಾಪಣೆ ಪತ್ರವನ್ನು ಪೊಲೀಸರಿಗೆ ಬರೆದುಕೊಟ್ಟಿದ್ದ. ಆದರೆ ಮಾಧ್ಯಮಗಳ ಎದುರು ಬಂದಾಗ ವಿದೇಶಿ ವಿದ್ಯಾರ್ಥಿ ಮಾತು ಬದಲಿಸಿ, ಪೊಲೀಸರು ಹಾಗೂ ಸ್ಥಳೀಯರು ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾಗಿ ಹೇಳಿದ್ದ. ಈ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ಅವರು ಘಟನೆಯ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಿದ್ದರು.ಘಟನೆ ನಡೆದ ಹೋಟೆಲ್‍ನ ಸಿಸಿಟಿವಿ ವಿಡಿಯೋ ಪರಿಶೀಲನೆ, ದೂರುದಾರ ರಮೇಶ್ ಹಾಗೂ ಅವರ ಬೆಂಬಲಿಗರು, ಹೋಟೆಲ್ ಸಿಬ್ಬಂದಿ ಹಾಗೂ ಕೆಲ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಿರುವ ತನಿಖಾ ತಂಡ, ಅವರೆಲ್ಲರಿಂದ ಹೇಳಿಕೆ ದಾಖಲಿಸಿಕೊಂಡಿದೆ. ಎಲ್ಲಿಯೂ ಪೊಲೀಸರ ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂಬುದು ತನಿಖೆಯಲ್ಲಿ ದೃಢವಾಗಿದೆ ಎಂದು ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.