ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಕಾರು ಹರಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಹೆಬ್ಬಾಳ ರಿಂಗ್ ರಸ್ತೆಯ ಬೆತೆಲ್ ಚರ್ಚ್ ಬಳಿ ನಡೆದಿದೆ.
ಟಾಟಾ ಎಸ್ ಲಗೇಜ್ ನ ಆಟೋ ಚಾಲಕ ಸೈಯದ್ ಖಾಜಾವಾಲ(21) ರಸ್ತೆ ದಾಟುತ್ತಿದ್ದ ವೇಳೆ ಇಂಡಿಕಾ ಕಾರು ಹರಿದು ಮೃತಪಟ್ಟಿದ್ದಾರೆ. ಇವರು ಆಂಧ್ರ ಪ್ರದೇಶದ ಚಿತ್ತೂರು ಮೂಲದವರಾಗಿದ್ದಾರೆ.
ಬೆಂಗಳೂರಿನ ಬೋವಿರೆಡ್ಡಿ ಬಡಾವಣೆಯಲ್ಲಿ ಸೈಯದ್ ವಾಸವಾಗಿದ್ದರು. ರಾತ್ರಿ 8 ಗಂಟೆಗೆ ಮನೆಗೆ ಬಂದ ಇವರು ಸುತ್ತಾಡಿಕೊಂಡು ಬರುವುದಾಗಿ ಹೇಳಿ ಹೊರ ಹೋಗಿದ್ದರು. ಮಧ್ಯರಾತ್ರಿಯಾಗಿದ್ದರೂ ಮನೆಗೆ ವಾಪಸ್ ಆಗಿರಲಿಲ್ಲ. ಆದರೆ, ರಾತ್ರಿ 12.30ರಲ್ಲಿ ಬೆತೆಲ್ ಚರ್ಚ್ ಬಳಿ ಕಾರು ಹರಿದು ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಸಂಚಾರ ಪೊಲೀಸರು ಕಾರು ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.