ಬೆಂಗಳೂರು: ರಾಜ್ಯದಲ್ಲಿನ ಗಣಿ ಕಂಪನಿಗಳಿಂದ ಪತ್ಯೇಕ ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸುವಂತೆ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಕಾಯ್ದಿಸಿರಿದೆ.
ನ್ಯಾಷನಲ್ ಮಿನರಲ್ ಡೆವಲಪ್ ಮೆಂಟ್ ಕಾರ್ಪೊರೇಷನ್ ಸೇರಿದಂತೆ ಮತ್ತಿತರ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಮತ್ತು ನ್ಯಾ. ಬಿ.ವಿ ನಾಗರತ್ನ ಅವರಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.
ರಾಜ್ಯ ಸರ್ಕಾರ ಅರಣ್ಯ ಅಭಿವೃದ್ಧಿ ತೆರಿಗೆ ಕಾಯಿದೆ 98 (ಎ) ನ್ನು ಸೇರಿಸಿದೆ. ಆ ಮೂಲಕ ಗಣಿಗಾರಿಕೆಯನ್ನು ಅರಣ್ಯ ಸಂಪನ್ಮೂಲ ಎಂದು ಪರಿಗಣಿಸಿ ಹೆಚ್ಚುವರಿಯಾಗಿ ಶೇ.18 ರಷ್ಟು ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಈಗಾಗಲೇ ವಿವಿಧ ರೂಪಗಳಲ್ಲಿ ರಾಜ್ಯ ಸರ್ಕಾರಕ್ಕೆ ಶೇ.29 ರಷ್ಟು ತೆರಿಗೆಯನ್ನು ಗಣಿ ಕಂಪನಿಗಳು ಪಾವತಿಸುತ್ತಿವೆ. ಅದರ ಜೊತೆಗೆ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುವುದಕ್ಕೆ ಮುಂದಾಗಿದೆ ಎಂದು ಗಣಿ ಕಂಪನಿಗಳು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದವು.
ಮಧ್ಯಂತರ ಆದೇಶ: ಪ್ರಕರಣ ಕುರಿತಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪ್ರಸಕ್ತದ ಅರಣ್ಯ ಅಭಿವೃದ್ಧಿ ತೆರಿಗೆಯ ಶೇ.50 ರಷ್ಟು ಪಾವತಿಸಿ ಶೇ.50 ರಷ್ಟು ಬ್ಯಾಂಕ್ ಠೇವಣಿಯಿಡುವಂತೆ ಮಧ್ಯಂತರ ಆದೇಶ ನೀಡಿತ್ತು.