ಬೆಂಗಳೂರು ;`ವಾಟ್ ನಾನ್ಸೆನ್ಸ್' ಮೀಟಿಂಗ್ ನಡೆಯುವಾಗ ಇಲ್ಲಿ ಕುಳಿತುಕೊಂಡಿರುವುದಕ್ಕೆ ಆಗಲ್ವಾ? ನೀವೇನು ಎದ್ದೆದ್ದು ಓಡಾಡುತ್ತಲೇ ಇರುತ್ತೀರಲ್ಲಾ? ರಾಜ್ಯದ ಬರಗಾಲದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದರೂ ನಿಮಗೆ ಜವಾಬ್ದಾರಿ ಇಲ್ಲವೇ? ಇದೇನು ಮಕ್ಕಳಾಟಾನಾ ಇವರಿಗೆಲ್ಲ ನೋಟಿಸ್ ಕೊಡ್ರಿ... ಸಿಎಂ ಸಿದ್ದರಾಮಯ್ಯ ಹಿರಿಯ ಐಎಎಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೀತಿ ಇದು. ಬರಗಾಲದ ಬಗ್ಗೆ ಡಿಸಿ, ಸಿಇಒ ಸೇರಿದಂತೆ ಹಿರಿಯ ಅ„ಕಾರಿಗಳೊಂದಿಗೆ ಸಭೆ ನಡೆಯುತ್ತಿದ್ದಾಗ ಹಿರಿಯ ಐಎಎಸ್ ಅಧಿಕಾರಿಗಳಾದ ವಿ. ಉಮೇಶ್, ಪಿ.ಬಿ. ರಾಮಮೂರ್ತಿ, ಶ್ರೀವಸ್ತ ಕೃಷ್ಣ ಅವರು ಆಚೆಗೆ ಹೋಗುತ್ತಿದ್ದರು, ಆಗಾಗ ಓಡಾಡುತ್ತಿದ್ದರು. ಇದರಿಂದ ಬೇಸತ್ತ ಮುಖ್ಯಮಂತ್ರಿಯವರು `ಇದೇನು ಮಕ್ಕಳಾಟನೇನ್ರೀ' ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಉಮೇಶ್ ಅವರನ್ನು ಪ್ರಶ್ನಿಸಿದರು. `ಇಲ್ಲಾ ಸಾರ್, ನನ್ನ ಆಫೀಸ್ ಪಕ್ಕದಲ್ಲೇ ಅಲ್ವಾ. ಅಲ್ಲಿದ್ದೆ' ಎಂದರು. `ನಾನೇನು ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದೇನಾ? ಈ ಹಾಲ್‍ನಲ್ಲಿ ಸಭೆ ನಡೆಯೋದು ಏನು ಮಾತಾಡ್ತೀವಿ ಅನ್ನೋದು ನಿಮಗೆ ಅಲ್ಲಿ ಕೂತುಕೊಂಡ್ರೆ ಗೊತ್ತಾಗುತ್ತಾ? ವಾಟ್ ನಾನ್ಸೆನ್ಸ್' ಎಂದು ತರಾಟೆಗೆ ತೆಗೆದುಕೊಂಡರು.
ಅದೇ ಸಮಯಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಬಿ. ರಾಮಮೂರ್ತಿ, ಇ-ಆಡಳಿತದ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಬಂದರು. `ಎಲ್ಲಿ ಹೋಗಿದ್ರೀ ಇಷ್ಟೊತ್ತು? ಈಗ ಮಧ್ಯಾಹ್ನ ಸಭೆಗೆ ಬರೋದಾ' ಎಂದು ಸಿಎಂ ಪ್ರಶ್ನಿಸಿದರು. ಆಗ ರಾಮಮೂರ್ತಿ `ಕೋರ್ಟ್ ಇತ್ತು ಹೋಗಿದ್ದೆ' ಎಂದರು. `ನಿಮ್ಮದ್ದೆಲ್ಲ ಇಷ್ಟೇ ಆಯಿತು. ಸೀರಿಯಸ್‍ನೆಸ್ ಇಲ್ಲ. ಚೀಫ್ ಸೆಕ್ರೆಟ್ರಿಯವರೆ ಇವತ್ತು ಸಭೆಯಲ್ಲಿ ಹೀಗೆಲ್ಲ ಆಗಾಗ್ಗೆ ಎದ್ದೆದ್ದು ಓಡಾಡಿದವರು, ಸಭೆಗೆ ಬಾರದವರು ಎಲ್ಲವರಿಗೂ ನೋಟಿಸ್ ಕೊಡಿ ಎಂದು ತಾಕೀತು ಮಾಡಿದರು.