ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಬಗ್ಗೆ ಮೂಲ ಕಾಂಗ್ರೆಸ್ಸಿಗರಿಗಾರಿಗೂ ಇಷ್ಟ ಇಲ್ಲ. ಆದರೆ ಈ ಮೈತ್ರಿಯಿಂದ ಕಾಂಗ್ರೆಸ್ ಲಾಭಕ್ಕಿಂತ ನಷ್ಟವೇ ಹೆಚ್ಚು. ಜೆಡಿಎಸ್‍ಗೆ ಇದು ಅನುಕೂಲವಾಗುತ್ತದೆ ಎಂದು ವಿಧಾನಸಭೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್‍ಗೆ ಅಧಿಕಾರ ಇರುವುದು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮೇಲೆ ಟೀಕೆ ಮಾಡುವವರೊಂದಿಗೇ ಸೇರಿಕೊಳ್ಳುವುದು ಸರಿಯಲ್ಲ. ಈ ಮೈತ್ರಿಯಿಂದ ಕಾಂಗ್ರೆಸ್‍ಗೆ ಲಾಭವಾಗುವುದಿಲ್ಲ. ದೇವೇಗೌಡ ಈ ಮೈತ್ರಿಗೆ ಒಪ್ಪಿದ್ದಾರೆ. ಅವರು ಭಾರೀ ಲೆಕ್ಕಾಚಾರವನ್ನು ಮಾಡಿಯೇ ಇದಕ್ಕೆಲ್ಲ ಒಪ್ಪಿದ್ದಾರೆ. ಅವರಿಗೆ ಚಾನ್ಸ್ ಸಿಕ್ಕಿದೆ. ಈಗ ಆಟ ಆಡಿಸುತ್ತಾರೆ. ಅವರ ಮುಂದೆ ಹೋಗಿ ಕೇಳಿಕೊಳ್ಳುವ ಪ್ರಕ್ರಿಯೆ ಸರಿಯಾದುದಲ್ಲ. ಕಾಂಗ್ರೆಸ್‍ಗೆ ಇದು ಭಾರೀ ಹೊಡೆತ ಎಂದು ಬುಧವಾರ ಸುದ್ದಿಗಾರರ ಜೊತೆ ಅನಿಸಿಕೆ ಹಂಚಿಕೊಂಡರು.
ಈ ಮೈತ್ರಿಯ ಬಗ್ಗೆ ಇನ್ನಷ್ಟು ಯೋಚನೆ ಮಾಡಬಹುದಿತ್ತು. ಅಧಿಕಾರಕ್ಕಾಗಿ ಹೀಗೆ ಮಾಡಿರುವುದು ಸರಿ ಅಲ್ಲ. ಕಾಂಗ್ರೆಸ್‍ನ ಎಲ್ಲರಿಗೂ ಈ ಮೈತ್ರಿ ಬಗ್ಗೆ ಸಮಾಧಾನ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನ ಮೇಲೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದರು.