ಬೆಂಗಳೂರು: ನಿಯಂತ್ರಣ ತಪ್ಪಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೈಕ್ ಚಲಾಯಿಸುತ್ತಿದ್ದ ಬಿಪಿಒ ಸಂಸ್ಥೆಯ ಮಾಲೀಕ ಹಾಗೂ ಉದ್ಯೋಗಿ ಮೃತಟ್ಟಿರುವ ಘಟನೆ ಮಾರತ್ತಹಳ್ಳಿ ರಿಂಗ್ ರಸ್ತೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ರಾಮಮೂರ್ತಿ ನಗರ ನಿವಾಸಿಗಳಾದ ವಸಂತಕುಮಾರ್(26) ಹಾಗೂ ಕೌಶಿಕ್ (23) ಮೃತರು. ಸಹೋದರಿ ಜತೆ ಸ್ವಂತ ಬಿಪಿಒ ಕಂಪನಿ ನಡೆಸುತ್ತಿದ್ದ ವಸಂತಕುಮಾರ್, ಅವರ ಅಜ್ಜ ತೀರಿಕೊಂಡಿದ್ದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಸಹೋದರಿಯನ್ನು ಬಿಟ್ಟು ಬರಲು ಸಿಲ್ಕ್ ಬೋರ್ಡ್‍ಗೆ ತೆರಳಿದ್ದರು. ತಡರಾತ್ರಿ 1 ಗಂಟೆ ಸುಮಾರಿಗೆ ಬುಲೆಟ್ ಬೈಕ್‍ನಲ್ಲಿ ಸ್ನೇಹಿತ ಕೌಶಿಕ್ ಜತೆ ಮನೆಗೆ ವಾಪಸಾಗುತ್ತಿದ್ದರು. ಮಾರತಹಳ್ಳಿ ರಿಂಗ್ ರಸ್ತೆ ಜೀವಿಕಾ ಆಸ್ಪತ್ರೆ ಬಳಿ ತೆರಳುತ್ತಿದ್ದಾಗ ರಸ್ತೆ ಹಂಪ್ಸ್ ಬಂದಿದೆ. ವೇಗವಾಗಿದ್ದ ಕಾರಣ ಹಂಪ್ ದಾಟಿದ ನಂತರ ನಿಯಂತ್ರಣ ತಪ್ಪಿದ ಬೈಕ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹಳೇ ಏರ್ ಫೋರ್ಟ್ ಸಂಚಾರ ಪೊಲೀಸರು ಹೇಳಿದ್ದಾರೆ.
ಪಾದಚಾರಿ ಸಾವು: ಬೈಕ್ ಡಿಕ್ಕಿ ಹೊಡೆದು ಭಾರತ್ ಎಲೆಕ್ಟ್ರಾನಿಕ್ಸ್ ನ ಮಾಜಿ ಉದ್ಯೋಗಿ ಮೃತಪಟ್ಟಿರುವ ಘಟನೆ ಫ್ರೇಜರ್‍ಟೌನ್‍ನ ಮುರೇ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಇಲ್ಲಿನ ನಿವಾಸಿ ಮುನಾವರ್ ಅಲಿ(71) ಮೃತರು. ಈ ಸಂಬಂಧ ವಾಹನ ಸವಾರ ಶಿವಾಜಿ ನಗರ ನಿವಾಸಿ ಮಹಮ್ಮದ್ ಹಾಜಿಯನ್ನು ಪುಲಕೇಶಿ ನಗರ ಸಂಚಾರ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ವಶಕ್ಕೊಪಿಸಲಾಗಿದೆ. ಬುಧವಾರ ರಾತ್ರಿ 8 ಗಂಟೆಗೆ ಪ್ರಾರ್ಥನೆ ಮುಗಿಸಿಕೊಂಡು ಅಲಿ ಅವರು ನಡೆದುಕೊಂಡು ಮನೆಗೆ ಮರಳುತ್ತಿದ್ದರು. ಮುರೇ ರಸ್ತೆಯಲ್ಲಿ ಹೋಗುತ್ತಿದ್ದಾಗ 8.15ರ ಸುಮಾರಿಗೆ ಬೈಕ್‍ನಲ್ಲಿ ವೇಗವಾಗಿ ಬಂದ ಮಹಮ್ಮದ್, ಬ್ರೇಕ್ ಹಾಕಿದ ರಭಸಕ್ಕೆ ಆತನ ತಲೆ ಹಾಜಿ ತಲೆಗೆ
ಅಪ್ಪಳಿಸಿದೆ. ನೆಲಕ್ಕೆ ಬಿದ್ದ ಅಲಿ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ವ್ಹೀಲಿಂಗ್ ಮಾಡುತ್ತಿದ್ದರು?: ಸ್ಥಳೀ ಯರ ಪ್ರಕಾರ ಮಹಮ್ಮದ್ ಹಾಜಿ ಮಾತ್ರವಲ್ಲದೇ ಜತೆಗೆ ಇನ್ನು ಇಬ್ಬರು ಯುವಕರು ಬೈಕ್‍ನಲ್ಲಿದ್ದರು. ಬೈಕ್ ವ್ಹೀಲಿಂಗ್ ಮಾಡಲಾಗುತ್ತಿತ್ತು. ಅತಿ ವೇಗದಿಂದ ಬೈಕ್ ಚಲಾಯಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ವೃದ್ಧ ಅಲಿ ಅವರಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಆದರೆ, ಪೊಲೀಸರು ವ್ಹೀಲಿಂಗ್ ನಡೆದಿರುವುದನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಒಂದು ವೇಳೆ ವ್ಹೀಲಿಂಗ್ ಆಗಿದ್ದರೆ, ಬೈಕ್ ಓಡಿಸುತ್ತಿದ್ದ ಅಮ್ಜದ್ ಹಾಗೂ ಇತರರಿಗೂ ಗಂಭೀರ ಪೆಟ್ಟಾಗುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ.