ಬೆಂಗಳೂರು: ಬೆಂಗಳೂರು ನಗರದಲ್ಲಿ ಶುಕ್ರವಾರ ಸುರಿದ ಜೋರು ಮಳೆಗೆ ಜನ ಜೀವನ ಅಸ್ತವ್ಯಸ್ತ-ಗೊಂಡಿದ್ದು, ವಾಹನ ಸಂಚಾರಕ್ಕೂ ಅಡ್ಡಿಯಾಯಿತು. ಉಕ್ಕಿ ಹರಿದ ಚರಂಡಿ ನೀರು ರಸ್ತೆ ತುಂಬಿಕೊಂಡಿದ್ದರಿಂದ ಸಂಚರಿಸಲು ಜನ ಪರದಾಡಿದರು. ಸಂಜೆಯ ನಂತರ ನಗರದ ಬಹುತೇಕ ಪ್ರದೇಶಗಳಲ್ಲಿ ಮತ್ತೆ ಜೋರಾದ ಮಳೆಯಿಂದ ಕೆಲವೆಡೆ ರಾಜಕಾಲುವೆ ನೀರೂ ರಸ್ತೆಗೆ ಬಂದಿತು. ನಾಲ್ಕೈದು ಅಡಿಗಳವರೆಗೆ ನೀರು ನಿಲ್ಲುವ ಮೂಲಕ ಸಾರ್ವಜನಿಕ ಜೀವನ ಬಹುತೇಕ ಅಸ್ತವ್ಯಸ್ತಗೊಂಡಿತು. ಇಸ್ರೋ ಲೇಔಟಿನ ವಿಠಲನನಗರದ ಪ್ರದೇಶ ವ್ಯಾಪ್ತಿಯಲ್ಲಿ 3 ಕೆರೆಗಳಿದ್ದು, ಮಳೆ ಜೋರಾಗುತ್ತಲೇ ಚರಂಡಿ ಹಾಗೂ ರಾಜಕಾಲುವೆಗಳ ನೀರು ರಸ್ತೆ ತುಂಬಿಕೊಂಡಿತು. ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಯಿತು.
ಮನೆಗಳಿಗೆ ನುಗ್ಗಿದ ನೀರು: ತಗ್ಗುಪ್ರದೇಶದ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ರಾತ್ರಿಯಿಡೀ ಜಾಗರಣೆ ಮಾಡುವ ಪರಿಸ್ಥಿತಿ ಉಂಟಾಗಿತ್ತು. ರಸ್ತೆಯಲ್ಲೇ ಸುಮಾರು ನಾಲ್ಕು ಅಡಿಯವರೆಗೂ ನೀರು ನಿಂತುಕೊಂಡಿದ್ದರಿಂದ ಮನೆಗೆ ನುಗ್ಗಿದ ನೀರನ್ನು ಹೊರಹಾಕುವುದಕ್ಕೂ ಅವಕಾಶವಾಗಿಲ್ಲ. ಒಂದು ವೇಳೆ ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ ಅದು ತಲುಪಲು ಸಾಧ್ಯವಾಗದ ರೀತಿ ನೀರು ನಿಂತಿದ್ದು ಬಹುತೇಕ ಪ್ರದೇಶಗಳಲ್ಲಿ ಕಂಡುಬಂದಿತು. ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ತಳ್ಳಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಕೆರೆ ಸಮೀಪದ ಪ್ರದೇಶದ ಜನ ಹಾವುಗಳ ಭಯದಲ್ಲೇ ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಿದರು. ವಿನೋಬಾ ನಗರದಲ್ಲಿ ಮಳೆ ಬಿದ್ದ ಪರಿಣಾಮ ಮರದ ಕೊಂಬೆಯೊಂದು ಬಿದ್ದು ವಿದ್ಯುತ್ ಕಡಿತಗೊಂಡಿತು. ಸ್ಥಳೀಯರು ಮರದ ತುಂಡನ್ನು ಚರಂಡಿಗೆ ಹಾಕಿದ ಪರಿಣಾಮ ಚರಂಡಿ ಕಟ್ಟಿಕೊಂಡು ಅಲ್ಲಿನ ನೀರು ಅಪಾರ್ಟ್‍ಗೆ ನುಗ್ಗಿದ ಘಟನೆಯೂ ನಡೆದಿದೆ. ಈ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ತೆರಳಿ ಪರಿಹಾರ ಕಾರ್ಯ ಕೈಗೊಂಡರು.