ಬೆಂಗಳೂರು: ಶಾಲೆಗೆ ಹೋಗಿದ್ದ ಮೂವರು ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿಯಾಗಿರುವ ಘಟನೆ ಬಾಣಸವಾಡಿ ಸಮೀಪದ ಪಿಳ್ಳಣ್ಣ ಗಾರ್ಡ್‍ನ್‍ನಲ್ಲಿ ನಡೆದಿದೆ.
ಗಾರ್ಮೆಟ್ಸ್‍ನಲ್ಲಿ ಕೆಲಸ ಮಾಡುವ ನಸೀಯಾ ಬೇಗಂ ಎಂಬುವರ ಮಕ್ಕಳಾದ ಆಲಿ ಅಬ್ಬಾಸ್ ಬೇಗಂ (8), ಉಸ್ಮಾನ್ ಬೇಗಂ (4) ಮತ್ತು ರಹೀಂ ಬೇಗಂ (6) ಕಾಣೆಯಾಗಿರುವ ಮಕ್ಕಳು.
ಆ.27ರಂದು ಬೆಳಗ್ಗೆ ಶಾಲೆಗೆ ಹೋಗಿದ್ದ ಮಕ್ಕಳ ಶಾಲೆ ಮುಗಿಸಿಕೊಂಡು ವಾಪಸ್ ಮನೆಗೆ ಮರಳಿಲ್ಲ. ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ಮನೆಗಳಲ್ಲಿ ಹುಡುಕಾಡಿದ ತಾಯಿ ಎಲ್ಲಿಯೂ ಸುಳಿವು ಸಿಗದಿದ್ದಾಗ ಬಾಣಸವಾಡಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಅಪಹರಣದ ಶಂಕೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದೂರವಾಗಿ ಹೈದರಾಬಾದ್‍ನಲ್ಲಿ ನೆಲೆಸಿರುವ ಪತಿಯ ಮಕ್ಕಳನ್ನು ಅಪಹರಿಸಿರುವ ಕುರಿತು ನಸೀಯಾ ಬೇಗಂ ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್‍ಗೆ ತೆರಳಿದ ಪೊಲೀಸರ ತಂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಆತ ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿದೆ. ನಂತರ ಮತ್ತೊಬ್ಬನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೈವಾಡ ಇಲ್ಲವೆಂದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಆ.27ರ ಮಧ್ಯಾಹ್ನ ಶಾಲೆಯಿಂದ ಹೊರಟ ಮಕ್ಕಳು ಪಿಳ್ಳಣ್ಣಗಾರ್ಡನ್ ಸಮೀಪದ ರೈಲ್ವೆ ಕ್ರಾಸಿಂಗ್ ಬಳಿ ಅಂಕಲ್ ಅಂಕಲ್ ಎಂದು ವ್ಯಕ್ತಿಯೊಬ್ಬನ ಜತೆ ಹೋಗಿದ್ದನ್ನು ಸ್ಥಳೀಯರು
ನೋಡಿರುವುದಾಗಿ ಹೇಳಿದ್ದಾರೆ. ಬಳಿಕ ಮಕ್ಕಳು ಎಲ್ಲಿಗೆ ಹೋದರು, ಯಾರ ಜತೆಗಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ತಾಯಿ ಅನುಮಾನ ವ್ಯಕ್ತಪಡಿಸಿದ ವ್ಯಕ್ತಿಗಳನ್ನು ವಿಚಾರಣೆ
ನಡೆಸಲಾಗಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ, ಮಕ್ಕಳ ಫೋಟೋ ಇರುವ ಭಿತ್ತಿಪತ್ರಗಳನ್ನು ಮುದ್ರಿಸಿ ನಗರದ ಎಲ್ಲ ಮಸೀದಿಗಳು, ಮದರಸಾಗಳು ಹಾಗೂ
ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.