ರಾಮನಗರ: ರಾಜ್ಯದಲ್ಲಿ ಮೂರು ಗಂಟೆ ವಿದ್ಯುತ್ ಕಡಿತವಾಗುತ್ತಿದ್ದು, ಇಂಧನ ಸಚಿವ ಡಿ.ಕೆ ಶಿವಕುಮಾರ್ ರಾಜೀನಾಮೆಗೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಈಶ್ವರಪ್ಪ, ದೆಹಲಿಗೆ ತೆರಳಿ ರಾಜಕಾರಣ ಮಾಡಿದ್ದ ಡಿಕೆ ಶಿವಕುಮಾರ್, ಹೈಕಮಾಂಡ್ ಮೂಲಕ ಒತ್ತಡ ಹಾಕಿಸಿ ಸಚಿವ ಸ್ಥಾನ ಪಡೆದಿದ್ದರು. ರಾಜ್ಯದ ಜನತೆಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗದಿದ್ದರೆ ಸಚಿವ ಸ್ಥಾನದಲ್ಲಿ ಏಕೆ ಮುಂದುವರೆಯಬೇಕು ಎಂದು ಪ್ರಶ್ನಿಸಿದ್ದಾರೆ.
ಪ್ರತಿ ದಿನ 3 -4 ತಾಸು ವಿದ್ಯುತ್ ಕಡಿತವಾಗುತ್ತಿದ್ದು ರಾಜ್ಯ ಕತ್ತಲಲ್ಲಿ ಮುಳುಗಿದೆ. ನಿರಂತರ ವಿದ್ಯುತ್ ಪೂರೈಕೆ ಮಾಡುವ ಸಾಮರ್ಥ್ಯ ಇಲ್ಲದಿದ್ದರೆ ಶಿವಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಈಶ್ವರಪ್ಪ, ಸಿದ್ದರಾಮಯ್ಯ, ಮುಂದಿನ ಚುನಾವಣೆವರೆಗೂ ಅಧಿಕಾರದಲ್ಲಿರುವುದು ಅನುಮಾನ, ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜ್ಯಕಾರಣಕ್ಕೆ ಬರಲು ಸಿದ್ದರಾಗಿದ್ದಾರೆ. ಅಲ್ಲದೇ ಬಿಬಿಎಂಪಿಯಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವ ದೇವೇಗೌಡರು ಸಹ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಬಿಬಿಎಂಪಿ ಮೈತ್ರಿ ಬೇರೆ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಎರಡೂ ಬೇರೆ ಲೆಕ್ಕಾಚಾರ. ಜೆಡಿಎಸ್ ಎಂದಿಗೂ ಅವಕಾಶವಾದಿ ರಾಜಕಾರಣ ಮಾಡುತ್ತದೆ ಎಂದಿದ್ದಾರೆ.