ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಎನ್ಎಬಿಹೆಚ್ ನಿಂದ ಮಾನ್ಯತೆ ದೊರೆತಿದೆ.
ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್ಎಬಿಹೆಚ್) ರಾಷ್ಟ್ರೀಯ ಗುಣಮಟ್ಟದ ವಿಮರ್ಶಣಾ ಮಂಡಳಿಯಾಗಿದ್ದು ರಾಜ್ಯದಲ್ಲಿ ಎನ್ಎಬಿಹೆಚ್ ನಿಂದ ಮಾನ್ಯತೆ ಪಡೆದ ಪ್ರಥಮ ಸರ್ಕಾರಿ ಆಸ್ಪತ್ರೆ ಹಾಗೂ ದೇಶದಲ್ಲೇ ಮೊದಲ ಬಾರಿಗೆ ಮಾನ್ಯತೆ ಪಡೆದ ಸರ್ಕಾರಿ ಹೃದ್ರೋಗ ಕೇಂದ್ರ ಎಂಬ ಹೆಗ್ಗಳಿಕೆಗೆ ಜಯದೇವ ಆಸ್ಪತ್ರೆ ಪಾತ್ರವಾಗಿದೆ.
ಪ್ರಸ್ತುತ ಎನ್ಎಬಿಹೆಚ್ ನೀಡಿರುವ ಮಾನ್ಯತೆ ಸೆ.2 ರಿಂದ 2018 ರ ಸೆಪ್ಟೆಂಬರ್ 1 ವರೆಗೆ ಜಾರಿಯಲ್ಲಿರಲಿದೆ. ಸಿಬ್ಬಂದಿಗಳ ಬದ್ಧತೆ, ಅತ್ಯುತ್ತಮ ವೈಜ್ಞಾನಿಕ ಪದ್ಧತಿ, ಆಡಳಿತಾತ್ಮಕ ತಿದ್ದುಪಡಿ, ಸುವ್ಯವಸ್ಥಿತ ಅನುಷ್ಟಾನದಿಂದ ಮಾನ್ಯತೆ ಪಡೆಯಲು ಸಾಧ್ಯವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ತಿಳಿಸಿದ್ದಾರೆ.