ಬೆಂಗಳೂರು: ನೌಕರರಿಗೆ ಮಾತ್ರ ಹಂಚಿಕೆ ಮಾಡಬೇಕಿದ್ದ ನಿವೇಶನಗಳನ್ನು ಬಿಡಿಎ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿಗಳು ಕಾನೂನುಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ನಿವೃತ್ತ ನೌಕರರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡುವ ನೌಕರರಿಗೆ ನಿವೇಶನ ನೀಡಲು ರಾಜ್ಯ ಸರ್ಕಾರ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಒಟ್ಟು 45 ಎಕರೆಗಳನ್ನು ಮಂಜೂರು ಮಾಡಿತ್ತು. ಅದರಲ್ಲಿ ಈವರೆಗೆ 24 ಎಕರೆಯನ್ನು ಸಂಘದ ವಶಕ್ಕೆ ನೀಡಿದೆ. ಇದರಲ್ಲಿ ನಿವೇಶನ ರಚಿಸಿ ಸಂಘದ ಅಧ್ಯಕ್ಷರಾದ ಟಿ.ಎನ್. ಬೆಟ್ಟೇಗೌಡ ಮತ್ತು ಕಾರ್ಯದರ್ಶಿ ಮಲ್ಲಣ್ಣ ಅವರು ಖಾಸಗಿ ವ್ಯಕ್ತಿಗಳಿಗೆ ಮತ್ತು ಬಿಡಿಎ ನೌಕರರಲ್ಲದವರಿಗೂ ಹಂಚಿಕೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸಹ ಈ ನಿವೇಶನಗಳ ಲಾಭ ಪಡೆದಿದ್ದಾರೆ ಎಂದು ನಿವೃತ್ತ ನೌಕರರು ಸುದ್ದಿಗೋಷ್ಠಿಯಲ್ಲಿ ದೂರಿದರು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಜೆ.ಪಿ. ನಗರ 9ನೇ ಹಂತ ಹಾಗೂ ಬನಶಂಕರಿ 6ನೇ ಹಂತಕ್ಕೆಂದು ಮೀಸಲಿರಿಸಿದ ಜಾಗವನ್ನು ಸರ್ಕಾರ 2006ರಲ್ಲಿ ಸರ್ಕಾರ ಸಂಘಕ್ಕೆ ನೀಡಿದೆ. ಈ ಸಂದರ್ಭದಲ್ಲಿ ಬಿಡಿಎ ನೌಕರರಿಗೆ ಮಾತ್ರ ನಿವೇಶನ ನೀಡಬೇಕೆಂದು ಷರತ್ತು ವಿಧಿಸಿದೆ. ಆದರೆ, ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು 1976ರ ಬಿಡಿಎ ಕಾಯ್ದೆ ನಿಯಮ 65 ಮತ್ತು 65 ಬಿಯನ್ನು ಉಲ್ಲಂಘಿಘಿಸಿ ಖಾಸಗಿಯವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ.
ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಜಿಲ್ಲಾ ನೋಂದಣಾಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಿಡಿಎ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಆದರೂ ಅಕ್ರಮವಾಗಿ ನಿವೇಶನ ಹಂಚುವುದು ನಿಂತಿಲ್ಲ. ಇತ್ತೀಚೆಗೆ ಕೂಡ ಎರಡು ನಿವೇಶನಗಳು ಖಾಸಗಿಯವರಿಗೆ ನೋಂದಣಿಯಾಗಿವೆ ಎಂದು ನಿವೃತ್ತ ನೌಕರ ಮುನಿರಾಜು ಆರೋಪಿಸಿದ್ದಾರೆ.