ನವದೆಹಲಿ: ಕರ್ನಾಟಕದಲ್ಲಿ ಸುಮಾರು ರು.2,500 ಕೋಟಿ ಬಂಡವಾಳ ಹೂಡಿಕೆ ಮಾಡುವ ಇಚ್ಛೆಯನ್ನು ವಿವಿಧ ವಲಯಗಳ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ. ನವೆಂಬರ್‍ನಲ್ಲಿ
ನಡೆಯಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶ ``ಇನ್ವೆಸ್ಟ್ ಕರ್ನಾಟಕ - 2015''ಕ್ಕೆ ಪೂರ್ವಭಾವಿಯಾಗಿ ದೆಹಲಿಯಲ್ಲಿ ನಡೆದ ಉದ್ಯಮಿಗಳೊಂದಿಗಿನ ಸಮಾಲೋಚನಾ
ಸಭೆ ಯಶಸ್ವಿಯಾಗಿದೆ. ಗುರುವಾರ ದಿನವಿಡೀ ನಡೆದ ಸಭೆಯಲ್ಲಿ ಐಟಿಸಿ, ಟಾಟಾ ಆಟೋಮೊಟಿವ್, ಐಕಿಯಾ, ಕಾರ್ಗಿಲ್, ಡಿಐಇಎಚ್‍ಎಲ್ ಏರೋಸಿಸ್ಟಮ್ ಆರ್‍ಆರ್‍ಬಿ ಎನರ್ಜಿ ಲಿಮಿಟೆಡ್, ಸಿನೋಹೈಡ್ರೋ ಮತ್ತಿತರ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಕೈಗಾರಿಕಾ ಆಯುಕ್ತ ಗೌರವ್‍ಗುಪ್ತ, ಕೃಷಿ, ವೈಮಾನಿಕ, ಇಂಧನ, ರಕ್ಷಣಾ ಮತ್ತು ಆಟೋಮೊಟಿವ್ ವಲಯದಲ್ಲಿ ಹೂಡಿಕೆ ಕುರಿತಂತೆ ಉದ್ಯಮಿಗಳಿಗೆ ಮಾಹಿತಿ ನೀಡಿ, ರಾಜ್ಯದಲ್ಲಿ ಹೂಡಿಕೆಗೆ ಇರುವ ಸದಾವಕಾಶಗಳನ್ನು ಮನವರಿಕೆ ಮಾಡಿದರು. ಬಹುತೇಕ ಹೂಡಿಕೆದಾರರು ಕರ್ನಾಟಕವನ್ನು ತಮ್ಮ ಮುಖ್ಯ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಸಂತಪ್ತರಾಗಿದ್ದಾರೆ. ಕಾರ್ಪೋರೇಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರು ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ರಾಜ್ಯದ ಸಕಾರಾತ್ಮಕ ಕೈಗಾರಿಕಾ ನೀತಿಯನ್ನು ಮೆಚ್ಚಿದ್ದಾರೆ ಎಂದು ಸಚಿವ ದೇಶಪಾಂಡೆ ತಿಳಿಸಿದರು. ಇದೇ ವೇಳೆ ರಾಜ್ಯದಲ್ಲಿ ವಹಿವಾಟು ನಡೆಸುವುದರಿಂದಾಗುವ ಅನುಕೂಲ ಕುರಿತ ವರದಿಯನ್ನು ಅವರು ಬಿಡುಗಡೆ ಮಾಡಿದರು. ರಾಜ್ಯದಲ್ಲಿ ಈಗಾಗಲೇ ವಹಿವಾಟು ನಡೆಸುತ್ತಿರುವ ಉದ್ಯಮಿಗಳ ಸಹಯೋಗದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ.