ಕೆರೆಗೆ ಬಂತು ಭವಿಷ್ಯದ ಕನಸು
ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಪರಿಸರ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಹೊರಮಾವು ಬಳಿಯ ಅಗರ ಕೆರೆಯಲ್ಲಿ `ಕೆರೆಹಬ್ಬ' ನಡೆಯಿತು. ಶಾಸಕ ಭೈರತಿ ಬಸವರಾಜು, ಬಿಬಿಎಂಪಿ ಸದಸ್ಯೆ ರಾಧಮ್ಮ, ಬಿಡಿಎ ಅಧಿಕಾರಿ ರವೀಂದ್ರ ತಳವಾಡಿ...
ಬೆಂಗಳೂರು: ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಪರಿಸರ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಹೊರಮಾವು ಬಳಿಯ ಅಗರ ಕೆರೆಯಲ್ಲಿ `ಕೆರೆಹಬ್ಬ' ನಡೆಯಿತು. ಶಾಸಕ ಭೈರತಿ ಬಸವರಾಜು, ಬಿಬಿಎಂಪಿ ಸದಸ್ಯೆ ರಾಧಮ್ಮ, ಬಿಡಿಎ ಅಧಿಕಾರಿ ರವೀಂದ್ರ ತಳವಾಡಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ವೇಲುಮಣಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಎಂಜಿನಿಯರ್ ಎಂ.ಸಿ. ರಮೇಶ್ ಪಾಲ್ಗೊಂಡಿದ್ದರು.
ಕೆರೆ ಹಬ್ಬದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರ, ಆಟಗಳು, ವರ್ಣಚಿತ್ರ ಬಿಡಿಸುವುದು ಮುಂತಾದ ಮನರಂಜನಾ ಚಟುವಟಿಕೆಗಳು, ಪಕ್ಷಿ ವೀಕ್ಷಣೆ, ವಸ್ತುಗಳ ಮಾರುಕಟ್ಟೆ, ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೆರೆಗಳ ಸ್ಥಳಗಳನ್ನು ವಸತಿ ಅಥವಾ ವಾಣಿಜ್ಯ ನಿರ್ಮಾಣಗಳು ಆಕ್ರಮಿಸಿಕೊಳ್ಳುವ ಗಂಭೀರ ಅಭಿಪಾಯವನ್ನು ಗ್ರಹಿಸಿಕೊಂಡು ಬೆಂಗಳೂರಿನ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ (ಎನ್ಬಿಎಫ್) ನಿರತವಾಗಿದೆ. ಇದರೊಂದಿಗೆ ನಗರದ ಅಂತರ್ಜಲ ಮಟ್ಟ ಕುಸಿಯುವುದನ್ನು ತಡೆಯಲು ಮುಂದಾಗಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಿ ಕೆರೆಗಳನ್ನು ಸಂರಕ್ಷಿಸಬೇಕು ಎಂಬ ಸಂದೇಶ ಸಾರಲಾಯಿತು.
ನಾಗರಿಕರ ಸಹಭಾಗಿತ್ವಕ್ಕೆ ಒತ್ತು: ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಪಬ್ಬಿಸೆಟ್ಟಿ, ಪರಿಸರ ಸಂಬಂಧಿ ಸಂಪನ್ಮೂಲಗಳ ಪುನರುಜ್ಜೀವನ ಮತ್ತು ಸಂರಕ್ಷಣೆ ಪ್ರತಿಷ್ಠಾನಕ್ಕೆ ಅತ್ಯಂತ ಪ್ರಮುಖ ಅಂಶವಾಗಿದೆ. ನಗರದ ಎಲ್ಲೆಡೆ ಇರುವ ಕೆರೆಗಳನ್ನು ಸಂರಕ್ಷಿಸಲು ಮುಂದೆ ಬಂದು ಸಹಯೋಗ ನೀಡಲು ನಾಗರಿಕರನ್ನು ಪ್ರೇರೇಪಿಸಲು ಮತ್ತು ಜಾಗೃತಿ ಮೂಡಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಜನರ ಧ್ವನಿಯಾಗಿ ಮುಂದುವರಿಯಲಿದ್ದೇವೆ. ಆದರೆ ನಾಗರಿಕರ ಭಾಗವಹಿಸುವಿಕೆ, ಸಕ್ರಿಯ ಬೆಂಬಲ ಇಂತಹ ಕಾರ್ಯಕ್ರಮಗಳಿಗೆ ಅಗತ್ಯವಿದೆ ಎಂದರು.
ಅಂತರ್ಜಲಕ್ಕೆ ಕೆರೆಗಳೇ ಆಧಾರ: ಪರಿಸರ ಅಭಿವೃದ್ಧಿ ಸಮಿತಿ ಸ್ಥಾಪಕ ಟ್ರಸ್ಟಿ ಜಾರ್ಜ್ ವರ್ಗೀಸ್ ಮಾತನಾಡಿ, ನಗರದ ಶೇ.40ರಷ್ಟು ಜನರು ನೀರಿಗಾಗಿ ಅಂತರ್ಜಲ ಆಧರಿಸಿದ್ದು, ಕೆರೆ ಸಂರಕ್ಷಿಸಬೇಕಾದ ಅಗತ್ಯವನ್ನು ಒತ್ತಿ ಹೇಳುವ ಅಗತ್ಯವಿಲ್ಲ. ಮುಂದಿನ 3 ವರ್ಷಗಳಿಗೆ ಸಾಕಾಗುವಷ್ಟು ಅಂತರ್ಜಲ ಮಾತ್ರ ನಗರ ಹೊಂದಿದೆ. ಉಳಿದ 185 ಕೆರೆಗಳ ಪುನರುಜ್ಜೀವನ ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಬೃಹತ್ ಪ್ರಮಾಣದ ನೀರಿನ ತೊಂದರೆಯನ್ನು ಎದುರು ನೋಡಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೆರೆ ಉಳಿಸಿ, ಅಂತರ್ಜಲ ಬೆಳೆಸಿ ಸಂದೇಶ ಮನದಟ್ಟು ಮಾಡಲಾಯಿತು.