ಮೈಸೂರು: ರೈತರ ಸರಣಿ ಆತ್ಮಹತ್ಯೆ, ಬರ ನಿರ್ವಹಣೆ ಮತ್ತು ವಿದ್ಯುತ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾದ್ಯಂತ ಆಯೋಜಿಸಿದ್ದ ಮೊದಲ ಹಂತದ ರೈತ ಚೈತನ್ಯ ಯಾತ್ರೆಯ ಸಮಾರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ನಡೆಯಿತು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು, ರೈತ ವಿರೋಧಿ ಸರ್ಕಾರವನ್ನು ಕಿತ್ತೊಗೆದು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.
ನಗರದ ಜೆ.ಕೆ ಮೈದಾನದಲ್ಲಿ ನಡೆದ ಸಮಾರೋಪದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಈ ಯಾತ್ರೆ ಅಂತ್ಯವಲ್ಲ ಆರಂಭ ಎಂದು ತಿಳಿಯಬೇಕು. ಮತ್ತೆ 2 ನೇ ಹಂತದ ಹೋರಾಟವನ್ನು ಅಕ್ಟೋಬರ್ ನಿಂದ ಆರಂಭಿಸುತ್ತೇವೆ. ಮೈಸೂರು, ಮಂಡ್ಯ, ಚಾಮರಾಜನಗರ ಭಾಗದಲ್ಲಿ ಮತ್ತೊಂದು ಯಾತ್ರೆ ಆರಂಭಿಸುತ್ತೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಇದನ್ನು ಬಡಿದೆಬ್ಬಿಸಲು ಸೋನಿಯಾ ಗಾಂಧಿ ಮತ್ತಿ ರಾಹುಲ್ ಗಾಂಧಿಯೇ ಬರಬೇಕು. ಇದು ಚುನಾವಣಾ ಸಮಯವಲ್ಲದಿದ್ದರೂ ಇಷ್ಟೊಂದು ಜನ ಸೇರಿರುವುದು ಸರ್ಕಾರದ ವಿರುದ್ಧ ಜನ ಎಷ್ಟು ಬೇಸತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ರೈತರು ಸಾಲಬಾಧೆಯಿಂದ ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಸಾಲ ಮನ್ನಾ ಮಾಡದೇ ಇದ್ದರೆ ನಾವು ಮೂಗು ಹಿಡಿದು ಸಾಲ ತೀರಿಸುವಂತೆ ಮಾಡುತ್ತೇವೆ. ಈ ವಿಷಯದಲ್ಲಿ ರೈತರಿಗೆ ಅನುಮಾನ ಬೇಡ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ. ಆದರೆ ಅದನ್ನು ಸರ್ಕಾರ ಬಳಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ವಾಸ್ತವ ಅಂಶ ಕಳಿಸಿಕೊಡಿ ಎಂದು ಕೇಂದ್ರ ಸರ್ಕಾರ ಕೇಳಿದ್ದರು ಇದುವರೆಗೂ ನೀಡಿಲ್ಲ ಎಂದರು.