ಬೆಂಗಳೂರು: ನಗರದ ಕೆ.ಆರ್.ಮಾರುಕಟ್ಟೆ ಬಳಿಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಿಂದ ಹಾಡಹಗಲೇ ರು.65 ಲಕ್ಷ ದೋಚಿ ಪರಿಯಾಗಿದ್ದ ಘಟನೆಯ ಪ್ರಮುಖ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಲಬ್ ವೊಂದರಲ್ಲಿ ಹಫ್ತಾ ವಸೂಲಿ ಮಾಡಿ ಪರಾರಿಯಾಗುತ್ತಿದ್ದ ವೇಳೆ ಸಾರ್ವಜನಿಕರ ಆತನನ್ನು ಹಿಡಿದು, ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಡಿಕೇರಿ ಮೂಲದ ರಂಜಿತ್ (32) ಹಲ್ಲೆಗೊಳಗಾಗಿ ಬಂಧಿತನಾಗಿರುವ ರೌಡಿಶೀಟರ್, ಭಾನುವಾರ ರಾತ್ರಿ ರಿಕ್ರಿಯೇಷನ್ ಕ್ಲಬ್ ವೊಂದರಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಬಂಧಿತ ಆರೋಪಿ ಭಾನುವಾರ ರಾತ್ರಿ ತನ್ನ ಸಹಚರರ ಜೊತೆ ಅಂಜನಾನಗರ ಸಮೀಪದ ಹರಿಹರನಗರದಲ್ಲಿನ ರಿಕ್ರಿಯೇಷನ್ ಕ್ಲಬ್ ಗೆ ಹೋಗಿ ಹಫ್ತಾ ವಸೂಲಿ ಮಾಡಿಕೊಂಡು ಹಿಂದಿರುಗುತ್ತಿದ್ದ. ಆರೋಪಿ ಹಾಗೂ ಆತನ ಸಹಚರರು ಕ್ಲಬ್ ನಿಂದ ಹೊರಬಂದ ನಂತರ ಕ್ಲಬ್ ಮಾಲೀಕರು ಕಳ್ಳ ಎಂದು ಜೋರಾಗಿ ಕೂಗಿದ್ದಾರೆ. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣ ಕ್ಲಬ್ ಬಳಿ ಧಾವಿಸಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ, ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ರಂಜಿತ್ ಸಿಕ್ಕಿಬಿದ್ದಿದ್ದಾನೆ. ಉಳಿದವರು ಪರಾರಿಯಾಗಿದ್ದಾರೆ. ಆತನನ್ನು ಥಳಿಸಿದ ಸ್ಥಳೀಯರು ನಂತರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಳಿಗೆ ಶೋಧ ನಡೆಸಿದ್ದಾರೆ ಎಂದು ತಿಳಿಸಿದರು. ಈ ಸಂಬಂಧ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.