ಬೆಂಗಳೂರು: ಬರೋಬ್ಬರಿ 9 ವರ್ಷಗಳ ಬಳಿಕ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿ ದ್ದ ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಭಾಗ್ಯ
ಲಭಿಸಿದೆ. ಕಳೆದ ತಿಂಗಳ ಸಚಿವ ಸಂಪುಟ ಸಭೆಯಲ್ಲಿ 253 ಕೈದಿಗಳ ಅವಧಿ ಪೂರ್ವ ಬಿಡುಗಡೆಗೆರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಮಂಗಳವಾರ
ರಾತ್ರಿ ಅಂಕಿತ ಹಾಕಿದ್ದು, ಗಣೇಶ ಚತುರ್ಥಿಯಂದೇ (ಗುರುವಾರ) ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಇರುವ ಈ ಕೈದಿಗಳು ಸಂಕೋಲೆ ಹಿಂದಿನ ಬದುಕಿನಿಂದ ಹೊರ ಬರಲಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ ಈ ಹಿಂದೆ ಬಿಜೆಪಿ ಸರ್ಕಾರ 3 ಬಾರಿ ಇದೇ ಕೈದಿಗಳ ಬಿಡುಗಡೆಗೆ ಪಟ್ಟಿ ತಯಾರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದರು. ಆದರೆ ನಿಯಮ ಪ್ರಕಾರ ಬಿಡುಗಡೆ ಪಟ್ಟಿ ತಯಾರಿಸಿಲ್ಲ ಎಂದು ಅಂದಿನ ರಾಜ್ಯಪಾಲ
ಹಂಸರಾಜ್ ಭಾರದ್ವಾಜ್ ಬಿಡುಗಡೆ ಪ್ರಕ್ರಿಯೆಗೆ ನಕಾರ ವ್ಯಕ್ತಪಡಿಸಿದ್ದರು. ಆದರೆ ಅದೇ ಪಟ್ಟಿಯನ್ನು ಕಾಂಗ್ರೆಸ್ ಸರ್ಕಾರ ಕಳುಹಿಸಿದ ಬೆನ್ನಲೇ ರಾಜ್ಯಪಾಲ ವಿ.ಆರ್.ವಾಲಾ ಕಾನೂನು ಪ್ರಕಾರ ಇದೆ ಎಂದು ಒಪ್ಪಿಗೆ ನೀಡಿದ್ದಾರೆ. ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಅಂದು ಅಧಿಕಾರದಲ್ಲಿದ್ದ ಜೆಡಿಎಸ್ -ಬಿಜೆಪಿ ಮೈತ್ರಿಕೂಟದ ಸರ್ಕಾರ
ಕೈದಿಗಳ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಕಾನೂನು ಸಮಸ್ಯೆ ಮುಂದೊಡ್ಡಿ ಸನ್ನಡತೆ ಹೊಂದಿದ ಕೈದಿಗಳ ಬಿಡುಗಡೆ ಪ್ರಕ್ರಿಯೆ 9 ವರ್ಷಗಳಿಂದ ನಡೆದೇ ಇರಲಿಲ್ಲ. ಆದರೆ ಈ ಅವಧಿಯಲ್ಲಿ ಕಾರಾಗೃಹದಿಂದ ಮುಕ್ತರಾಗುವ ಕನಸನ್ನು ಹೊತ್ತ 195 ಕೈದಿಗಳು ಮರಣ ಹೊಂದಿದ್ದರು. ಈ ಬಗ್ಗೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹಲವಾರು ಶಾಸಕರು ಹಾಗೂ ಸಂಸದರು ಕೈದಿಗಳ ಅವಧಿ ಪೂರ್ವ ಬಿಡುಗಡೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಸುಪ್ರೀಂಕೋರ್ಟ್‍ನಲ್ಲಿ ಈ ಪ್ರಕ್ರಿಯೆ ಬಗ್ಗೆ ಇದ್ದ ತಡೆಯಾಜ್ಞೆ ತೆರವುಗೊಂಡಿದ್ದರೂ ರಾಜ್ಯ ಸರ್ಕಾರ
ಕ್ರಮ ತೆಗೆದುಕೊಳ್ಳದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೆಲ್ಲದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಲಹಾ ಮಂಡಳಿ ಶಿಫಾರಸಿನ ಮೇರೆಗೆ 253 ಕೈದಿಗಳ ಬಿಡುಗಡೆಗೆ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ಇನ್ನೂ 933 ಅರ್ಹರು: ಆದರೆ ಈ ಪಟ್ಟಿ ಬಗ್ಗೆ ಕೆಲವು ಆಕ್ಷೇಪಗಳು ವ್ಯಕ್ತವಾಗಿದೆ. ಇದಕ್ಕಿಂತ ಹೆಚ್ಚು ಕೈದಿಗಳು ಬಿಡುಗಡೆಗೆ ಅರ್ಹರಾಗಿದ್ದರು. ಹಿಂದಿನ ಕಾರಾಗೃಹಗಳ ಎಡಿಜಿಪಿ ಗಗನ್‍ದೀಪ್ ಅವರು ತಯಾರಿಸಿದ ಪಟ್ಟಿ ಪ್ರಕಾರ 933 ಕೈದಿಗಳು ಅವಧಿಪೂರ್ವ ಬಿಡುಗಡೆಗೆ ಅರ್ಹರಾಗಿ ದ್ದರು. ನೆರೆ ರಾಜ್ಯಗಳಲ್ಲಿ ಅನುಸರಿಸುವ ಮಾನದಂಡಗಳ ಪ್ರಕಾರವೇ ಅವರು ಪಟ್ಟಿ ಸಿದ್ದಪಡಿಸಿದ್ದರು. ಆದರೆ ಕಾನೂನು ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇವಲ 253 ಮಂದಿ ಮಾತ್ರ ಅರ್ಹರಾಗಿದ್ದಾರೆ. 14 ವರ್ಷ ಶಿಕ್ಷೆ ಪೂರೈಸಿದ ಮಹಿಳೆಯರು, ವೃದ್ಧರು, ಮಾರಕ ರೋಗಕ್ಕೆ ತುತ್ತಾದವರನ್ನು ಪರಿಗಣಿಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಕಾರಾಗೃಹಗಳಿಂದ ಬಿಡುಗಡೆಯಾಗುತ್ತಿರುವ ಕೈದಿಗಳಿಗೆ ಹಲವು ವರ್ಷಗಳಿಂದ ಹೊರ ಜಗತ್ತಿನ ಸಂಪರ್ಕ ತಪ್ಪಿ ಹೋಗಿದ್ದು, ಸಾಲ ಸೌಲಭ್ಯ ನೀಡುವಂತೆ ಬೆಂಗಳೂರು
ಕಾರಾಗೃಹದ ಕೈದಿಗಳು ಎಡಿಜಿಪಿ ಅವರಿಗೆ ಪತ್ರ ಬರೆದಿದ್ದಾರೆ.