ರಾಜ್ ಕುಮಾರ್ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿ (ಕೃಪೆ: ಕೆಪಿಎನ್)
ಬೆಂಗಳೂರು: ಗಣೇಶ ಚತುರ್ಥಿ ಹಬ್ಬ ಕಳೆಯುತ್ತಿದ್ದಂತೆ ನಗರದ ಪಾದಚಾರಿ ಮಾರ್ಗಗಳಲ್ಲಿ, ರಸ್ತೆ ಬದಿಗಳಲ್ಲಿ ಕಸದ ರಾಶಿ ಬಿದ್ದಿದೆ. ಕೆ.ಆರ್. ಮಾರುಕಟ್ಟೆ, ಕೆ.ಆರ್. ಪುರ ಮಾರುಕಟ್ಟೆ, ಜಯನಗರ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಬಸವನಗುಡಿಯ ಗಾಂಧಿಬಜಾರ್, ಹಲಸೂರು, ವಿಲ್ಸನ್ ಗಾರ್ಡನ್, ಆಡುಗೋಡಿ ಸೇರಿದಂತೆ ಹಲವು ಸ್ಥಳಗಳಲ್ಲಿ ಕಸದ ರಾಶಿ ಬಿದ್ದಿದೆ. ಬಾಳೆಕಂಬ, ಬಾಳೆಎಲೆ, ಹೂವು, ಹಣ್ಣುಕಾಯಿ ಕಾಗದದ ರಾಶಿ ಅಲ್ಲಲ್ಲಿ ಬಿದ್ದಿದೆ. ವಿವಿಧ ಸಂಘಗಳು ಹಾಗೂ ವ್ಯಾಪಾರಿಗಳು ಮಾರಾಟ ಮಾಡಿದ ಸ್ಥಳದಲ್ಲೇ ಕಸ ಹಾಕಿದ್ದಾರೆ.
ಮಾರಾಟವಾಗದ ಸರಕು ತ್ಯಾಜ್ಯ: ಹಬ್ಬದ ದಿನ ಜನನಿಬಿಡ ಪ್ರದೇಶಗಳ ಪಾದಚಾರಿ ಮಾರ್ಗಗಳಲ್ಲಿ ಭರ್ಜರಿ ವ್ಯಾಪಾರ ನಡೆದಿತ್ತು. ಮಾರುಕಟ್ಟೆಗಳಲ್ಲೂ ಪೂಜಾ ಸಾಮಗ್ರಿಗಳಿಗೆ ಭಾರೀ ಬೇಡಿಕೆ ಕಂಡುಬಂದಿತ್ತು. ಆದರೆ, ನಂತರ ಉಳಿದ ಪೂಜಾ ಸಾಮಗ್ರಿ ಹಾಗೂ ಅನಗತ್ಯ ವಸ್ತುಗಳನ್ನು ಸ್ಥಳದಲ್ಲೇ ಬಿಡಲಾಗಿದೆ. ಬಾಳೆ-ಕಂಬ, ಬಾಳೆಎಲೆ ಹಸಿ ತ್ಯಾಜ್ಯವಾಗಿರುವುದರಿಂದ ಶೀಘ್ರವಾಗಿ ಕೊಳೆಯುತ್ತಿದೆ. ಈ ನಡುವೆ ಸಂಜೆಯವೇಳೆ ಕೆಲವೆಡೆ ಮಳೆಯಾಗಿದ್ದು, ಕಸ ಮತ್ತಷ್ಟು ದುರ್ನಾತ ಉಂಟುಮಾಡಿದೆ. ನಿತ್ಯ ಕಸ ಸಂಗ್ರಹಣೆಗೆ ಬರುವ ಪೌರ ಕಾರ್ಮಿಕರಿಗೆ ಹಲವು ಸ್ಥಳಗಳಲ್ಲಿ ಕಸ ವಿಲೇ ವಾರಿ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಹೆಚ್ಚುವರಿಯಾಗಿ ಆಟೋ, ಟಿಪ್ಪರ್ ಅಗತ್ಯವಿದ್ದಿದ್ದರಿಂದ ಬೆಳಗ್ಗೆ 10ರ ವೇಳೆಗೆಹೆಚ್ಚಿನ ಪ್ರದೇಶಗಳಲ್ಲಿ ಕಸವನ್ನು ಒಂದೇ ಬದಿಗೆ ಗುಡಿಸಿ ರಾಶಿ ಹಾಕಲಾಗಿತ್ತು.
ಹಬ್ಬದ ದಿನಗಳಲ್ಲಿ ಹೆಚ್ಚುವರಿ ಕಸ ವಿಲೇವಾರಿ ಮಾಡಬೇಕಿರುವುದರಿಂದ ವಾಹನ ಹಾಗೂ ಉಪಕರಣಗಳ ಕೊರತೆ ಉಂಟಾಗುತ್ತದೆ. ರಜಾದಿನಗಳಲ್ಲಿ ಅಧಿಕಾರಿಗಳೂ ಇಲ್ಲದೇ ಪೌರಕಾರ್ಮಿಕರೇ ಕಸ ವಿಲೇವಾರಿಯ ಎಲ್ಲ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ವಿವಿಧ ಸಂಘಗಳು ರಸ್ತೆಬದಿಗಳಲ್ಲೇ ಕಸ ಹಾಕುವ ಪರಿಪಾಠ ಬೆಳೆಸಿಕೊಂಡಿವೆ. ಮೊದಲನೇ ದಿನ ಅನೇಕ ಸಂಘಗಳು ಮೂರ್ತಿ ವಿಸರ್ಜನೆ ಮಾಡಿದ್ದು, ಪ್ರತಿಷ್ಠಾಪನೆ ಮಾಡಿದ ಕಸವನ್ನು ರಸ್ತೆಬದಿಗಳಲ್ಲೇ ಎಸೆಯಲಾಗಿದೆ. ಕೆರೆಗಳಲ್ಲಿ ಉಳಿದ ಗಣೇಶ: ಬಿಬಿಎಂಪಿಯಿಂದ 36 ಕೆರೆಗಳ ಬಳಿ ಹಾಗೂ 136 ಸಂಚಾರಿ ಘಟಕಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು. ಕೆರೆಗಳ ಬಳಿನಿರ್ಮಿಸಿರುವ ಕಲ್ಯಾಣಿಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಆದರೆ, ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳು ನೀರಿನಲ್ಲಿ ಕರಗದೆ ಉಳಿದುಕೊಂಡಿವೆ.
ಸಂಚಾರಿ ಘಟಕಗಳಲ್ಲೂ ಇದೇ ಪರಿಸ್ಥಿತಿ. ಸಂಚಾರಿ ಘಟಕಗಳು ಇನ್ನು ಒಂದು ವಾರಗಳ ಕಾಲ ಸಂಚರಿಸಬೇಕಾಗುತ್ತದೆ. ಆದರೆ, ಈಗಾಗಲೇ ಕರಗದ ಮೂರ್ತಿಗಳುತುಂಬಿಕೊಂಡಿರುವುದರಿಂದ ಘಟಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಲಾರಿಗಳಲ್ಲಿ ತುಂಬಿರುವ ನೀರಿನಲ್ಲಿ ಮೂರ್ತಿ ಹಾಕಿದರೂ ಕರಗದೆ ಹಾಗೆಯೇ ಉಳಿದುಕೊಳ್ಳುತ್ತದೆ. ಹೀಗಾಗಿ ಅರ್ಧ ಕರಗಿದ ಮೂರ್ತಿಯನ್ನೇ ತ್ಯಾಜ್ಯದ ರಾಶಿಗೆ ಎಸೆಯಲಾಗುತ್ತಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಿ ಎಂದುಬಿಬಿಎಂಪಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಎರಡು ದಿನ ಬೇಕು: ಹಬ್ಬದ ದಿನಗಳಲ್ಲಿ ಹೆಚ್ಚುವರಿ ಯಾಗಿ ಸೃಷ್ಟಿಯಾದ ಕಸ ಸಂಪೂರ್ಣವಾಗಿ ವಿಲೇವಾರಿಯಾಗಲು ಎರಡು ದಿನಗಳಾದರೂ ಬೇಕಾಗುತ್ತದೆ. ಪೌರಕಾರ್ಮಿಕರು ಮುಂಜಾನೆ ಕಸ ವಿಲೇವಾರಿ ಮಾಡುತ್ತಾರೆ. ಆದರೆ, ಇದು ಹೆಚ್ಚುವರಿ ಕಸವಾಗಿರುವುದರಿಂದ ಹೆಚ್ಚು ಪೌರಕಾರ್ಮಿಕರು ಹಾಗೂ ವಾಹನಗಳು ಬೇಕಾಗುತ್ತದೆ. ಹೀಗಾಗಿ ಎರಡು ದಿನಗಳ ಸಮಯಾವಕಾಶ ತೆಗೆದುಕೊಂಡು ಕಸ ವಿಲೇವಾರಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ದಕ್ಷಿಣ ವಲಯದಲ್ಲಿ ಹೆಚ್ಚಿನ ಹೊರೆಯಿದೆ. ದಕ್ಷಿಣ, ಬಸವನಗುಡಿ, ಬನಶಂಕರಿ, ಬೊಮ್ಮನಹಳ್ಳಿ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಂಗಿಪುರದ ಕಸ ಸಮಸ್ಯೆಯಿಂದ ಕಸ ಉಳಿದುಕೊಂಡಿತ್ತು. ಈಗ ಹಬ್ಬದಿಂದಾಗಿ ಮತ್ತಷ್ಟು ಕಸ ಇದಕ್ಕೆ ಸೇರ್ಪಡೆಯಾಗಿದೆ. ಹೀಗಾಗಿ ದಕ್ಷಿಣ ವಲಯದಲ್ಲಿ ಕಸ ಸಮಸ್ಯೆ ಅ„ಕವಾಗಿದ್ದು, ಪೌರಕಾರ್ಮಿಕರು ಹೆಚ್ಚುವರಿ ಕೆಲಸ ಮಾಡಬೇಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos