ಜಿಲ್ಲಾ ಸುದ್ದಿ

ಮಾಂಗಲ್ಯ ಭಾಗ್ಯದ ವಂಚಕನ ಸೆರೆ

ಬೆಂಗಳೂರು: ವಿಧವೆಯರು, ಪತಿ ತೊರೆದವರನ್ನು ವಿವಾಹವಾಗುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ವಿವಾಹವಾಗಲು ಸಂಪರ್ಕಿಸುವ ಮಹಿಳೆಯರಿಗೆ ಅಮಲು ಬರಿಸುವ ಪಾನೀಯ ಕೊಟ್ಟು ಚಿನ್ನಾಭರಣ ಹಾಗೂ ಹಣ ದೋಚುತ್ತಿದ್ದ ಖತರ್ನಾಕ್ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ದೊಡ್ಡಮುಳಗೋಡು ಗ್ರಾಮದ ಡಿ.ಎಂ.ರಾಮಕೃಷ್ಣ (46) ಬಂಧಿತ ಆರೋಪಿ. ಈತನಿಂದ 50 ಗ್ರಾಂನ ಎರಡು ಚಿನ್ನದ ಸರ, 40 ಗ್ರಾಂ ಅವಲಕ್ಕಿ ಸರ, 22 ಗ್ರಾಂನ ನೆಕ್ಲೇಸ್, 2 ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಾಹವಾಗುವುದಾಗಿ ಮಹಿಳೆಯರನ್ನು ವಂಚಿಸಿದ್ದು ಒಟ್ಟು 13 ಪ್ರಕರಣ ದಾಖಲಾಗಿವೆ.

ಆರೋಪಿ ಬಂಧನ ಸುದ್ದಿತಿಳಿದು ಹಲವರು ದೂರು ನೀಡಲು ಮುಂದೆ ಬರುತ್ತಿದ್ದಾರೆ ಎಂದು ಬನಶಂಕರಿ ಠಾಣಾ ಇನ್ಸ್ ಪೆಕ್ಟರ್ ಟಿಟಿ.ಕೃಷ್ಣ ಹೇಳಿದ್ದಾರೆ.  ಆಭರಣ ಧರಿಸಿ ಬರಲು ಹೇಳುತ್ತಿದ್ದ. 2015ರ ಜೂ 6ರಂದು ಈತನಿಂದ ವಂಚನೆಗೊಳಗಾದ ಮಹಿಳೆಯೊಬ್ಬರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಏಪ್ರಿಲ್ 26, 27ರಂದು ರಾಜ್ಯದ ದಿನಪತ್ರಿಕೆಯೊಂದರಲ್ಲಿ ಅನಿಲ್ ಪ್ರಸಾದ್ ಎಂಬಾತ ಜಾಹೀರಾತು ನೀಡಿದ್ದು, ತನಗೆ 40 ವರ್ಷ ವಯಸ್ಸಾಗಿದೆ. ಪತ್ನಿ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ನನ್ನ ವಯಸ್ಸಿಗೆ ಹೊಂದಿಕೊಳ್ಳುವ ವಧು ಬೇಕಾಗಿದೆ ಎಂದು ಮೊಬೈಲ್ ಸಂಖ್ಯೆ ನೀಡಿದ್ದ. ಆ ನಂಬರಿಗೆ ಕಾಲ್ ಮಾಡಿದಾಗ, ಆತ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ 2 ಸಾರಿ ಬಂದು ಭೇಟಿ ಮಾಡಿದ್ದ. ಒಂದು ದಿನ ನಿನ್ನನ್ನು ನಮ್ಮ ಪಾಲಕರಿಗೆ ತೋರಿಸುತ್ತೇನೆಂದು ನಂಬಿಸಿದ್ದ.

ಅದಕ್ಕಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಮನೆಯಲ್ಲಿರುವ ಎಲ್ಲಾ ಚಿನ್ನಾಭರಣ ಹಾಕಿಕೊಂಡು ಬರಲು ಹೇಳಿದ್ದ. ಅದರಂತೆ ಮೇ.8ರಂದು ಬೆಳಗ್ಗೆ ಆಟೋದಲ್ಲಿ ಕರೆದುಕೊಂಡು ಹೋಗಿ ಮೆಜೆಸ್ಟಿಕ್‍ನ ಮೌರ್ಯ ಹೊಟೇಲ್‍ನಲ್ಲಿ ತಿಂಡಿ ಕೊಡಿಸಿದ. ನಂತರ ಅಲ್ಲಿಂದ ಮಲ್ಲೇಶ್ವರದ ಮಂತ್ರಿ ಮಾಲ್‍ಗೆ ಕರೆದುಕೊಂಡು ಹೋಗಿ ಅಲ್ಲಿನ ಹೊಟೇಲ್‍ನಲ್ಲಿ ಪೆಪ್ಸಿಯನ್ನು ಆತನೇ ತಂದು ಕೊಟ್ಟಿದ್ದ. ಪೆಪ್ಸಿ ಕುಡಿದ ನಂತರ ನನಗೆ ಪ್ರಜ್ಞೆ ತಪ್ಪಿತ್ತು.

ಪೆಪ್ಸಿಯಲ್ಲಿ ಪ್ರಜ್ಞೆ ತಪ್ಪುವ ಔಷಧಿ ಹಾಕಿರುವುದು ಗೊತ್ತಾಯಿತು. ಎಚ್ಚರಗೊಂಡಾಗ ಬಿಡಿಎ ಕಾಪ್ಲೆಕ್ಸ್ ಬಳಿ ಇದ್ದೆ. ನಾನು ಧರಿಸಿದ್ದ 142 ಗ್ರಾಂ ಚಿನ್ನಾಭರಣ ಇರಲಿಲ್ಲ. ಒಡವೆ ದೋಚಿಕೊಂಡು ಹೋಗಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.

ಮಹಿಳೆಯರ ಹೆಸರಲ್ಲೇ ಸಿಮ್ ಖರೀದಿ: ಆರೋಪಿ ರಾಮಕೃಷ್ಣನಿಗೆ ವಿವಾಹವಾಗಿದ್ದು ಇಬ್ಬರು ಮಕ್ಕಳು ಇದ್ದಾರೆ. ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿ ಊರಿಗೆ ವಾಪಸಾದ ಬಳಿಕ ಮಹಿಳೆಯರಿಗೆ ವಂಚಿಸುವ ಕೆಲಸಕ್ಕೆ ಇಳಿದಿದ್ದ.

ಶ್ರೀಮಂತನಾಗಿರುವ ತನಗೆ ಪತ್ನಿ ಮೃತಪಟ್ಟಿದ್ದಾಳೆ. ಮತ್ತೊಂದು ವಿವಾಹ ವಾಗಬೇಕಿದ್ದು, ವಿಧವೆ, ವಿಚ್ಛೇದಿತ ಮಹಿಳೆಯರು ಸಂಪರ್ಕಿಸಬಹುದೆಂದು 2006ರಿಂದಲೇ  ಜಾಹೀರಾತು ನೀಡುತ್ತಿದ್ದ. ಸಂಪರ್ಕಿಸುವ ಮಹಿಳೆಯರ ಬಳಿ ಅಧಿಕೃತ ದಾಖಲೆ ಬೇಕೆಂದು ಹೇಳಿ ಫೋಟೋ ಹಾಗೂ ಗುರುತಿನ ಚೀಟಿ ಪಡೆದುಕೊಳ್ಳುತ್ತಿದ್ದ. ಅವರದೇ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಅದೇ ಸಂಖ್ಯೆಯನ್ನು ಜಾಹೀರಾತಿನಲ್ಲಿ ನೀಡುತ್ತಿದ್ದ. ಒಮ್ಮೆ ವಂಚಿಸಿದ ಬಳಿಕ ಆ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದ. ಪೊಲೀಸರು ಆ ವಿಳಾಸಕ್ಕೆ ಹುಡುಕಿ ಕೊಂಡು ಹೋದರೆ ನೊಂದ ಮಹಿಳೆಯರೇ ಸಿಗುತ್ತಿ ದ್ದರು. ಆರೋಪಿ ವಿರುದ್ಧ ವಂಚನೆ, ನಕಲಿ ಸಿಮ್ ಖರೀದಿ, ಪ್ರಜ್ಞೆ ತಪ್ಪಿಸುವ ಔಷಧಿ ನೀಡುವುದು ಸೇರಿ ಇತರ ಕಲಂಗಳನ್ನು ಅನ್ವಯಿಸಿ ಬಂಧಿಸಲಾಗಿದೆ.

SCROLL FOR NEXT