ಬೆಂಗಳೂರು: ರಸ್ತೆ ಗುಂಡಿಗೆ ಇಳಿಸುವುದನ್ನು ತಪ್ಪಿಸುವ ಭರದಲ್ಲಿ ಸಂಭವಿಸಿದ ಅಪಘಾತದಲ್ಲಿ ಪತ್ನಿ ಕಳೆದುಕೊಂಡ ಪತಿ ಓಂಪ್ರಕಾಶ್ ವಿರುದ್ಧವೆ ಅಜಾಗರೂಕ, ಅತಿವೇಗವಾಗಿ ವಾಹನ ಚಾಲನೆ ಆರೋಪದಲ್ಲಿ ಸಂಚಾರ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಸಂಚಾರ ಪೊಲೀಸರ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ ಅಪಘಾತ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಫ್ಲೈಓವರ್ ನಿರ್ಮಿಸಿ ನಿರ್ವಹಿಸುತ್ತಿದ್ದ ಬಿಡಿಎ ಹಾಗೂ ಬಿಬಿಎಂಪಿ ವಿರುದ್ಧವೂ ದೂರು ದಾಖಲಿಸಿ ಕೊಳ್ಳಲಾಗುತ್ತದೆ ಎಂದು ಹಳೇ ಏರ್ ಪೋರ್ಟ್ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.
ಕಳಪೆ ದುರಸ್ತಿ: ಮಹಿಳೆ ಬಲಿಯಾದ ಸುದ್ದಿ ಪತ್ರಿಕೆಗಳಲ್ಲಿ ವರದಿಯಾದ ಬಳಿಕ ಎಚ್ಚೆತ್ತು ಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಶನಿವಾರ ಬೆಳಗ್ಗೆ ಸಿಮೆಂಟ್ ಕಾಂಕ್ರಿಟ್ ಹಾಕಿ ರಸ್ತೆ ಗುಂಡಿ ಮುಚ್ಚಿಸಿದ್ದಾರೆ. ಗುರುವಾರ ರಾತ್ರಿ ಸ್ನೇಹಿತನ ಮನೆಗೆ ಗಣೇಶ ಹಬ್ಬಕ್ಕೆ ತೆರಳಿ ವಾಪಸ್ಸಾಗುತ್ತಿದ್ದಾಗ ಎಚ್ ಎಎಲ್ ಸಮೀಪದ ದೇವರಬೀಸನಹಳ್ಳಿ ಮೇತ್ಸೇತುವೆಯಲ್ಲಿ ದ್ವಿಚಕ್ರ ಅಪಘಾತ ಸಂಭವಿಸಿ ಟೆಕ್ಕಿ ಸ್ತುತಿ ಪಾಂಡೆ ಅವರು ಕೆಳಗೆ ಬಿದ್ದು ತಲೆಗೆ ತೀರ್ವ ಪೆಟ್ಟಾಗಿ ಮೃತಪಟ್ಟಿದ್ದರು. ಓಂಪ್ರಕಾಶ್ ಪತ್ನಿ ಶವವನ್ನು ಹುಟ್ಟೂರಿಗೆ ಭೋಪಾಲ್‍ಗೆ ತೆಗೆದುಕೊಂಡು ಹೋಗಿದ್ದು ಅಂತ್ಯಕ್ರಿಯೆ ಮುಗಿಸಿ ನಗರಕ್ಕೆ ವಾಪಸ್ಸಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.