ಮಕ್ಕಳ ಸಾವು: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಇತ್ತೀಚೆಗೆ ನಗರದಲ್ಲಿ 8 ವರ್ಷದ ಬಾಲಕಿ ಹಾಗೂ ಬಾಲಕನೊಬ್ಬ ತೆರೆದ ಚರಂಡಿ ಹಾಗೂ ತೊಟ್ಟಿಗೆ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ...
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ 8 ವರ್ಷದ ಬಾಲಕಿ ಹಾಗೂ ಬಾಲಕನೊಬ್ಬ ತೆರೆದ ಚರಂಡಿ ಹಾಗೂ ತೊಟ್ಟಿಗೆ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ವಿಚಾರಣೆ ಅಕ್ಟೋಬರ್ 21ರಂದು ನಡೆಯಲಿದೆ. ನಮ್ಮ ಬೆಂಗಳೂರು ಫೌಂಡೇಷನ್ ಸಂಸ್ಥಾಪಕ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‍ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ನ್ಯಾ. ಡಿ.ಎಚ್. ವಘೇಲಾ ಮತ್ತು ಆರ್.ಬಿ. ಬೂದಿಹಾಳ್ ಇದ್ದ ದ್ವಿಸದಸ್ಯ ಪೀಠ ಸರ್ಕಾರಕ್ಕೆ ನೋಟಿಸ್ ನೀಡಿದೆ. 8 ವರ್ಷದ ಬಾಲಕಿ ಹಾಗೂ 12 ವರ್ಷದ ಬಾಲಕನ ಸಾವಿಗೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎಂದು , ಎಂದು ಆರೋಪಿಸಿ ರಾಜೀವ್ ಚಂದ್ರಶೇಖರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಸರ್ಕಾರದ ನಿರ್ಲಕ್ಷ್ಯ ಆರೋಪ: ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಸಜ್ಜನ್ ಪೂವಯ್ಯ, `8 ವರ್ಷದ ಗೀತಾಲಕ್ಷ್ಮಿ ಎಂಬ ಬಾಲಕಿ ತೆರೆದಚರಂಡಿಯಲ್ಲಿ ಹಾಗೂ 12 ವರ್ಷದ ಯಶವಂತ್ ಎಂಬ ಬಾಲಕ ಗುಂಡಿಯಲ್ಲಿ ಬಿದ್ದು ಸಾವಿಗೀಡಾ ಗಿದ್ದರು. ಇಂಥ ಪ್ರಕರಣಗಳಲ್ಲಿ ಸರ್ಕಾರ ಮೃತರ ಕುಟುಂಬಕ್ಕೆ ಕೆಲ ಲಕ್ಷ ರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು' ಎಂದು ಕೋರಿದರು. ಸರ್ಕಾರ ಈ ಕೂಡಲೇ ಪ್ರಕರಣಗಳ ತನಿಖೆಗೆ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಗುರುತಿಸಬೇಕು. ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿ, ಈ ಅವಘಡಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸುವಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂ ಆಯುಕ್ತರಿಗೂ ನಿರ್ದೇಶನ ನೀಡಿ, ನಿಗದಿತ ಸಮಯದಲ್ಲಿ ಪರಿಹಾರ ಒದಗಿಸುವುದು, ಇಂತಹ ಅವಘಡ ಸಂಭವಿಸಿದಂತೆ ತುರ್ತಾಗಿ ಸುರಕ್ಷತೆ ಮತ್ತು ಭದ್ರತೆಯತ್ತ ಗಮನ ಹರಿಸುವುದು, ನಾಗರಿಕ ಸೌಲಭ್ಯಗಳನ್ನು ಸರಿಯಾಗಿ ತಲುಪಿಸುವುದು ಮತ್ತು ಯಾವುದೇ ಅನಾಹುತ ನಸಂಭವಿಸದಂತೆ ಎಚ್ಚರ ವಹಿಸುವ ಕಡೆ ಸರ್ಕಾರ ಗಮನ ಹರಿಸಬೇಕಾಗಿದೆ. ಬಿಬಿಎಂಪಿ ಕೂಡಲೇ ಕ್ರಮ ತೆಗೆದುಕೊಂಡು ನಗರಾದ್ಯಂತ ಬಾಯ್ದೆರೆದಿರುವ ಮ್ಯಾನ್‍ಹೋಲ್‍ಗಳನ್ನು ಮುಚ್ಚಬೇಕು. ಜನರಲ್ಲೂ ಈ ಕುರಿತು ಜಾಗೃತಿ ಮೂಡಿಸುವಂತಾಗಲಿ ಎಂದು ಸಂಸದ ರಾಜೀವ್
ಚಂದ್ರಶೇಖರ್ ಕೋರಿದ್ದಾರೆ. ಅರ್ಜಿದಾರರ ಎಲ್ಲಾ ಉಲ್ಲೇಖಗಳನ್ನು ಆಲಿಸಿದ ದ್ವಿಸದಸ್ಯ ನ್ಯಾಯ ಪೀಠವು ಅಕ್ಟೋಬರ್ ಅಕ್ಟೋಬರ್ 21 ಕ್ಕೆ ವಿಚಾರಣೆ ಮುಂದೂಡಿದೆ.