ಬೆಂಗಳೂರು: ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಅವಾಂತರ ವಿರುದ್ಧ ಭಾನುವಾರ ಸಹ ವಿವಿಧೆಡೆ ಪ್ರತಿಭಟನೆಗಳು ನಡೆದವು. ಇಲ್ಲಿನ ಗೃಹ ವಿಜ್ಞಾನ ಪರೀಕ್ಷಾ ಕೇಂದ್ರದ ಮುಂದೆ ಬೆಳಿಗ್ಗೆ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿ ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಕೆಪಿಎಸ್ಸಿಯನ್ನು ಒತ್ತಾಯಿಸಿದರು.
ಅಚ್ಚುಕಟ್ಟಾಗಿ ನಡೆಯಬೇಕಾದ ಪರೀಕ್ಷೆಯನ್ನುಕೆಪಿಎಸ್ಸಿ ಉದಾಸೀನದಿಂದ ನಡೆಸುತ್ತಿದೆ. ಪ್ರಶ್ನೆ ಪತ್ರಿಕೆಯು ಮುಂಚಿತವಾಗಿ ಸೋರಿಕೆಯಾಗಿರುವುದರಿಂದ ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸಿದರು. ಸಂಜೆ ದಿನದ ಪರೀಕ್ಷೆ ಮುಗಿದ ನಂತರ ಪುನಃ ಅಭ್ಯರ್ಥಿಗಳು ಕೆಪಿಎಸ್ಸಿಯತ್ತ ಹೊರಟರು. ಆದರೆ, ಕೆಪಿಎಸ್ಸಿ ಕಚೇರಿಗೆ ತೆರಳುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಅರಿತು ತಣ್ಣಗಾದರು.
ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಕೆಪಿಎಸ್ಸಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ,ಪರೀಕ್ಷೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ. ಬೇರೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನೀಡಲಾಗುತ್ತದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಸೆ.19ರಂದು ನಡೆದ ಗೆಜೆಟೆಡ್ ಪ್ರೊಬೆಷನರ್ಸ್ ಮುಖ್ಯ ಪರೀಕ್ಷೆಯ ಪ್ರಬಂಧ ಪ್ರಶ್ನೆ ಪತ್ರಿಕೆಯಲ್ಲಿ ಬೇರೆ ವಿಷಯಗಳ ಪ್ರಶ್ನೆ ಪತ್ರಿಕೆಗಳು ನೀಡಲಾಗಿದೆ ಎಂದು ಕೆಲವು ಅಭ್ಯರ್ಥಿಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಮುಂದಿನ ಪರೀಕ್ಷೆಗೆ ಈ ಪತ್ರಿಕೆಗಳು ಬರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಊಹಾಪೋಹಗಳಿಗೆ ಕಿವಿಗೊಡಬಾರದೆಂದು ಮತ್ತು ಪರೀಕ್ಷೆಯನ್ನು ಯಥಾ ಪ್ರಕಾರ ಈಗಾಗಲೇ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.